ಶನಿವಾರ, ನವೆಂಬರ್ 12, 2011

ಏಕಾಂತದ ದ್ವೀಪ...

ನೀನಾಗು ಬಾ ನಾವಿಕ, ನಲ್ಲನೆ
ತೇಲಿಸು ಬಾ ಏಕಾಂತದ ದ್ವೀಪಕೆ ಮೆಲ್ಲನೆ,

ನಾಚಿಕೆಯ ನೀರ ಮೇಲೆ
ನಂಬಿಕೆಯ ನೌಕೆಯ ನೂಕಿ...
ಬಯಕೆಯ ತೆಳು ಪಟವ ಏರಿಸಿ
ಎಲ್ಲ ದಿಕ್ಕುಗಳ ಕಟ್ಟಿ
ಸೆಳೆದೊಯ್ಯು ನನ್ನ ದ್ವೀಪದತ್ತ ತೇಲಿಸಿ...

ನೀರಲ್ಲಿ ಪ್ರೀತಿ ಮುತ್ತುಗಳ ಹುಟ್ಟಾಕಿ,
ಹುಟ್ಟುವ ಪ್ರತಿ ಸ್ಪರ್ಶದಲೆಯೊಂದಿಗೆ
ಏರಿಳಿದು ಮೆಲ್ಲಗೆ
ದಾಟಿಸು ಬಾ ನನ್ನ
ಮಧು ಹನಿಸುವ ಜಲಪಾತದ ನಡುಗಡ್ಡೆಗೆ...

ಅಂಬಿಗನೆ ಎಳೆದೊಯ್ಯು ಬಾ ಏಕಾಂತಕೆ
ಯಾರೂ ಬರದಿರುವ ದ್ವೀಪಕೆ...

ನಂಬುಗೆ ಅಂಬಿಗ ನೀನು
ನಾಚಿ ನಡುನೀರಲ್ಲಿ ನಾನು
ಮುಖ ಮುಚ್ಚಿ ಮುಳುಗಿದರೂನು
ಕೈ ಬಿಡಿಸಿ ಜಾರದಂತೆ,
ಹಿಡಿದು ಮೇಲೆತ್ತಿ ಕರೆದೊಯ್ಯು ಬಾ ನೀನು...

ದಡ ಸೇರಿ ಇಳಿಯ ಬೇಕು-ಬೇಡಗಳ
ಓಲಾಡುವ ತಳಮಳ
ಆಯ ತಪ್ಪಿಸದಂತೆ ನಿನ್ನವಳ...
ಹಿಡಿದು ನೀನಿಳಿಸು ಬಾ
ಬೇಕೆನಿಸುವ ಭಾವಗಳ...

ಹೋಗೋಣ ಬಾ ನಲ್ಲನೆ, ಏಕಾಂತದ ದ್ವೀಪಕೆ
ನೀರ ಬಿಟ್ಟು ಮೇಲೆತ್ತುವ ಎತ್ತರಕೆ...

ರತಿಸುಖದ ಝರಿಯಿಂದ,
ಕೆಳಗಿಳಿದು ಮೇಲಿಂದ
ಸ್ವೇಚ್ಚೆಯ ತಂಪಲ್ಲಿ ಮೀಯುವಾ,
ಬಯಕೆ ನಗ್ನತೆಯ ಮೀರುತ
ಮನದಾಳದ ದಾಹವ ನೀಗಿಸುವಾ...

ಉಸಿರಾಗಿ ಜಲಪಾತದಿ ಸುರಿಯುವ
ತೃಪ್ತಿಯ ನದಿಯೊಂದು, ತುಂಬುವ-
ತುಳುಕುವ ಮೊದಲೇ
ಮಧು ಸೇವಿಸಿ ತಪ್ಪಿಸುವ
ಆಸೆ ಉಕ್ಕುವ ಪ್ರವಾಹವ...

ಬಾ ನಲ್ಲನೆ, ಏಕಾಂತಕೆ
ಸರಿಯೋಣ ಸದ್ದಿಲ್ಲದೆ ಒಂದಾಗಿ ಸೇರುವ ದ್ವೀಪಕೆ...

ರುದ್ರಪ್ಪ...

ಕಾಮೆಂಟ್‌ಗಳಿಲ್ಲ: