ಬುಧವಾರ, ನವೆಂಬರ್ 30, 2011

ಮನೆಯ ಬೆಳಕು

ಮನೆಯ ಬೆಳಕು

ತನ್ನಿರೈ ತಣ್ಣೀರ ಸುರಿಯೋಕೆ
ಮಧು-ಮಕ್ಕಳ ಕೂರುವ ಹಸಿ-ಮಣೆಗೆ...

ಎಣ್ಣೆ ಸುರಿಯಬೇಡಿ ಕಾಳ್ಗಿಚ್ಚಿನ ತರಹ
ತಂತಾನೇ ಹೊತ್ತಿ ಉರಿವ ವರದಕ್ಷಿಣೆಗೆ...

ಪಿಡುಗು ನಮ್ಮಿಂದಲೇ ಕೊನೆ ಕಾಣಲಿ,
ಸಾವಿಲ್ಲದ ಸಂಸಾರ ಜ್ಯೋತಿ ಚಿರವಾಗಲಿ...

ಸೇರಿ ಹಚ್ಚಿದ ಹಣತೆ, ದುರಾಸೆಯ ಕತ್ತಲಲ್ಲಿ
ಹುದುಗಿದ ಚಿರ ಬೆಳಕಿಗೆ ಜೀವ ಮರಳಿಸಲಿ...



ಒಂದು ಹಣತೆಯಿಂದ ಇನ್ನೊಂದು ಹಣತೆ
ಹೀಗೆ ಮನೆ ಮನೆಯಲ್ಲಿ ಬೆಳಕು ಜೀವ ಕಾಣಲಿ...

ರುದ್ರಪ್ಪ...

ಮಂಗಳವಾರ, ನವೆಂಬರ್ 29, 2011

ಗುಜರಿ ಅಂಗಡಿ ಗೋಣಿ ಚೀಲ



ಗುಜರಿ ಅಂಗಡಿ ಗೋಣಿ ಚೀಲ

ಮನೆಯ ಗುಜರಿಯೊಂದು
ಗೋಣಿ ಚೀಲ ಹೊಕ್ಕು
ಇಣುಕುತಿದೆ ತರ್ಕ ಕಿಂಡಿಯಲಿ ...

ಹಳೆ ಪುಸ್ತಕ ಹಾಳೆಗಳ 
ಒಟ್ಟಿದ ಹೆಣಗಳ ಹರಿಯುವ ರಕ್ತ ಹೆಪ್ಪುಗಟ್ಟುತಿದೆ   
ಕಟ್ಟು ಬಿದ್ದು ಕಟ್ಟಿದ ಕಸುಬಿನ ಸೆಣಬಿನಲಿ...

ಇಷ್ಟ ಪಟ್ಟು ಕಷ್ಟ ಬಿದ್ದ   
ಕನಸಿನ ಪುಸ್ತಕಗಳು ಕೊನೆಯವಕಾಶ 
ಕೊಟ್ಟು ಕೈಚಾಚುತಿವೆ ತರ್ಕದ ತೂತಿನಲಿ....

ಗೊತ್ತಿಲ್ಲ!! ಬೇರೆ ಯಾರಾದರು 
ಬೆಲೆ ಕೊಟ್ಟರೆ ಮಾರುವ ಮನಸಿದೆಯೇನೋ 
ಕಟ್ಟಿ ಎಲ್ಲ ಒಟ್ಟಿಗೆ ಗುತ್ತಿಗೆಯಲಿ....

ಒಳ ಮಾತು, ಒಂದು ಕಡೆ ನಾ ಕಡೆಗಣಿಸಿದ 
ತರ್ಕವಿದ್ದರೆ ಮತ್ತೊಂದೆಡೆ ನನ್ನ
ಕೂಸಿನ ಕುತ್ತಿಗೆಗೆ ನಾ ಹೇಗೆ ಸೆಣಬೆಳೆಯಲಿ?

ಅರ್ಥವಾಗದು!! ಕಷ್ಟ ವರ್ಷಗಳ ಹಾಜರಿ ನೀಡಿ
ಪಡೆಯಲು ಸಾಲಲ್ಲಿ ನಿಂತ ನಾ ಇಂದು 
ಅಭಿಮಾನವ ಹೇಗೆ ಕಟ್ಟಿ ಬಿಟ್ಟೆ ಗುಜರಿಯಲಿ?..  

ನಾನೇ ಕೊಡದ ಬೆಲೆಯ 
ಗುಜರಿಯವ ಏನು ಕೊಟ್ಟಾನು
ಎಷ್ಟು ಕೊಂಡಾನು ಕಂತೆಯ ಕಟ್ಟಿನಲಿ?...

ನೋವು ಮುತ್ತಿದೆ, ತಮ್ಮ ತಂಗಿ, ಮಕ್ಕಳೆಲ್ಲ 
ಮುಟ್ಟುವದಿಲ್ಲ ಗುಜರಿಯ ನನ್ನಿಂದ ಕಲಿತ ಕಲಿಕೆಯಲಿ, 
ತಲೆಮಾರಿಗೆ ಪದೆ ಪದೇ ಬದಲಾಗುವ ಪಠ್ಯ ಕ್ರಮದಲಿ...   

ಕೊನೆಗೆ ಮನೆ ಬಿಟ್ಟು ಹೋಗುವಾಗ 
ಯಾರು ಕೊಳ್ಳಲಾರದ ಗುಜರಿಯ ಹೊತ್ತು 
ನಾನೇ ಸಾಗಬೇಕು ಭಾರದ ನೋವಿನಲಿ, ನೆನಪಿರಲಿ...!!!

ಎಣ್ಣೆ ದೀಪದ ಜೊತೆ ಬೆಳಕು ಆರುತಿದೆ 
ಎಲ್ಲೋ ನನ್ನ ನಾ ಕತ್ತಲೆಯಲಿ ಹುಡುಕಲು
ಹಚ್ಚಿದ ಇಷ್ಟದ ದೀವಿಗೆಯಲಿ...

ಕೊನೆಯ ಗಳಿಗೆ ತಿಳಿಯದಾಗಿದೆ 
ವಂಶ ದಾರಿಗೆ ಅಸುನೀಗುವ 
ಯಾವ ಬೆಳಕು ಯಾರಿಗೆ ಹೇಗೆ ಬಿಟ್ಟು ಹೋಗಲಿ....!!

ನಮ್ಮಲ್ಲಿ ಎಷ್ಟೋ ಜನ ಇವತ್ತು ಕಲಿತದ್ದು ಒಂದಾದರೆ ಕೆಲಸ ಮಾಡೋದು ಇನ್ನೊಂದು. ಒಂದಕ್ಕೊಂದು ಸಂಭಂಧವಿರುವದಿಲ್ಲ. ಇದ್ದರು ಅದು ನಮ್ಮಿಷ್ಟವಾಗಿರುವದಿಲ್ಲ. ಕಾರಣ ಹಣದ ಸೆಳೆತವಾಗಬಹುದು, ವ್ಯಾಮೋಹವಿರಬಹುದು ಅಥವಾ ಕೀಳರಿಮೆಯಿರಬಹುದು. ಅಂತಹ ಒಂದು ಆಯ್ಕೆಯ ಮನದಾಳದ ಮಾತನ್ನು ಸೆರೆಹಿಡಿಯುವ ಪ್ರಯತ್ನ.

ರುದ್ರಪ್ಪ...

ಶುಕ್ರವಾರ, ನವೆಂಬರ್ 25, 2011

ಕಣ್ಣು ಮುಂದಿರುವ ಲಿಂಗ


ಕಳ್ಳ ಮನಸ ಕಲ್ಲಾಗಿದ್ದು ಇವತ್ತ ಎದ್ದಂಗೈತಿ ಸಿವಾ, ನನ್ನೊಳಗಿನ ಸಿವಾ ಮೆಚ್ಚ್ಯಾನು... ಕೈಹಿಡದು ಕೆಳಗಿನ ಸಾಲು ಬರಸ್ಯಾನು...ಓದಿ ಹೆಂಗೈತಿ ತಿಳಸ್ರ್ಯಲ್ಲ....

ಕಲ್ಲ ಲಿಂಗದ ಮ್ಯಾಲೆ ಕಳ್ಳ ಮನಸಿಟ್ಟರ,
ಸಾವಿರ ಸುಳ್ಳ ಲಿಂಗ ಎಂದು ಬೆಳ್ಳಗಾಗೈತಿ?

ಕೈಮುಗದ ಜೊಳ್ಳ ಜೋಡಿ ಹಸ್ತದ ಮುಂದ,
ಮಳ್ಳನಾಗೋ ಲಿಂಗವಲ್ಲೋ ಅದು ಮಂದಾ....

ಬೆಳ್ಳಿ ಗುನಗಡಿಗಿ ಒಳಗಾ ಕೊಡಿಟ್ಟಿಯೇನ ಅವನ?
ಒಳ್ಳೆ ಗುಣ ಗಡಿಗೆಯೊಳಗೆ ಸಿಕ್ಕ ಬೀಳೊ ಸಿವನ ....

ಅಂಗೈಯ್ಯಾಗ ತೊಳದು ಈಬತ್ತಿ ಬಡದೆನ್ ಮಾಡ್ತಿ ?
ಬುದ್ದಿ ಬೂದ್ಯಾಗ ಎದ್ದೇಳೋವ್ನ ಎಷ್ಟಂತ ತೊಳೀತಿ?

ಕಣ್ಮುಂದ ಹಿಡ್ಕೊಂಡು ಕಣ್ಮುಚ್ಚಿ ಅವನ್ಯಾಕ ಹುಡಕ್ತಿ?
ಕಣ್ಣ ಬಿಟ್ಟು ಒಳಗಾ ನೋಡು ಬರೆ ಅವನ್ನ ಕಾಣ್ತಿ ...

ರುದ್ರಪ್ಪ...

ಗುರುವಾರ, ನವೆಂಬರ್ 24, 2011

ಒಲವಿರಬೇಕು



ಮಾಲೀಕನ ಹಾಗೆ ಬಾಡಿಗೆ ಕೇಳದೆ ಒಲವಿರಬೇಕು
ಸರ್ಕಾರದ ಹಾಗೆ ಸುಂಕ ಕೇಳದೆ ಒಲವಿರಬೇಕು
ಗುಮಾಸ್ತನ ಹಾಗೆ ಲಂಚ ಕೇಳದೆ ಒಲವಿರಬೇಕು
ಮಧ್ಯಸ್ತನ ಹಾಗೆ ಬೆಲೆ ಕೇಳದೆ ಬಾಳುವ ಒಲವಿರಬೇಕು

ಅಮ್ಮನ ಹಾಗೆ ಕೇಳದೆ ಅರಿತು ಕೊಡುವ ಒಲವಿರಬೇಕು
ಅಪ್ಪನ ಹಾಗೆ ದಾರಿ ಕೈ ಹಿಡಿದು ನಡೆಸುವ ಒಲವಿರಬೇಕು
ಅಕ್ಕನ ಹಾಗೆ ಕಚಗುಳಿಯಿಟ್ಟು ನಗಿಸುವ ಒಲವಿರಬೇಕು
ಅಣ್ಣನ ಹಾಗೆ ರಹಸ್ಯ ಬಿಟ್ಟುಕೊಡದ ಒಲವಿರಬೇಕು

ಬಿಳಿಯ ಶುಭ್ರ ಕಮಲದಂತೆ ಕೆಸರಲ್ಲೂ ತಲೆಯೆತ್ತಿ ಬಾಳುವ ಒಲವಿರಬೇಕು
ನೇರಳೆಯಂತೆ ಚಿಕ್ಕದಾದರೂ ತಪ್ಪದೆ ಸಿಹಿ ಹಣ್ಣ ನೀಡುವ ಒಲವಿರಬೇಕು
ಹಕ್ಕಿಯಂತೆ ರೆಕ್ಕೆ ಬಿಚ್ಚಿ ಹಾರಿ ಗೂಡಿಗೆ ಮರಳುವ ಒಲವಿರಬೇಕು
ಸೂರ್ಯ ಚಂದ್ರರಂತೆ ಹಾಡಿ ಮಲಗಿಸುವ ಎಬ್ಬಿಸುವ ಒಲವಿರಬೇಕು

ಸಾಕಲ್ಲವೇ ಇಷ್ಟು ? ಬಾಳಲ್ಲಿ ಬದುಕಲು ಇನ್ನೇನು ಬೇಕು?

ರುದ್ರಪ್ಪ...

ಕಂಡೂ ಕಾಣದಿರುವ ಹೊಟ್ಟೆಗಳು


ನಂಟು ಮರೆತ ಬಣ್ಣ ಬಣ್ಣದ ಹೊಟ್ಟೆಗಳ ಹಿಂದೆ
ನಂಟ ಜನಿಸಿ ನೋವ
ಹೊತ್ತು ಸತ್ತು ಹೆತ್ತ ಹೊಟ್ಟೆಗಳು...

ಹೊರ ಬಿದ್ದ ಹೊಟ್ಟೆಗಳ ಹಿಂದೆ
ಮರೆಯ ಹೊರೆಯ ಹೊರೆಯುವ
ಅದರಿ ಅವಿತ ಜೀತದ ಹೊಟ್ಟೆಗಳು...

ಬವಣೆಯಿಲ್ಲದ ಬದುಕು ಬತ್ತದ ಹೊಟ್ಟೆಗಳ ಹಿಂದೆ
ಒಪ್ಪೊತ್ತಿನ ಗಂಜಿಯ ಕಷ್ಟ
ಬೆನ್ನಿಗಂಟಿ ಬೆವರಿದ ಹೊಟ್ಟೆಗಳು...

ಹತ್ತಿ, ರೇಷ್ಮೆಯ ಹೊಟ್ಟೆಗಳ ಹಿಂದೆ
ಮಾನಕೆ ಗೇಣು ಬಟ್ಟೆ ಬೇಡುವ
ಬಾಗಿ ಬೆಳೆಯುವ ಬೆತ್ತಲೆ ಹೊಟ್ಟೆಗಳು...

ಮಾತಾಡಿ ನುಣ್ಣಗೆ ಜಾರುವ ಹೊಟ್ಟೆಗಳ ಹಿಂದೆ
ಮಾತಿನ ನಂಬಿಕೆಗೆ ಜೋತಾಡಿ
ಮಾತು ಹೊರಬರದೆ ಹೆಣಗುವ ಹೊಟ್ಟೆಗಳು...

ಕುಣಿಸುವ ಮಣಿಸುವ ಹೊಟ್ಟೆಗಳ ಹಿಂದೆ
ಇನ್ನಿಲ್ಲದಂತೆ ತಿಂದು ಮೌಲ್ಯವ
ಕುಣಿಯುವ ಕುಸಿಯುವ ಹೊಟ್ಟೆಗಳು...

ಕೊಂಡು ಉಸಿರಾಡುವ ಹೊಟ್ಟೆಗಳ ಹಿಂದೆ
ಉಸಿರಿಲ್ಲದೆ ಕೊಸರಾಡಿ
ಕೊಳ್ಳಲಾಗದೆ ಕೊನೆಯುಸಿರೆಳೆಯುವ ಹೊಟ್ಟೆಗಳು...

ಕೈತುತ್ತು ಸವರಿ ಸವಿಯುವ ಹೊಟ್ಟೆಗಳ ಹಿಂದೆ
ಸವಿಯದೆ ಹಳಿವ ಉಳಿವ
ಅನ್ನ ತಿಂದು ಅಸುನೀಗುವ ಸಣ್ಣ ಸಣ್ಣ ಹೊಟ್ಟೆಗಳು...

ಮರಗುವ ಕರಗುವ ಮೋಸದ ಹೊಟ್ಟೆಗಳ ಹಿಂದೆ
ನಂಬಿ ಮೋಸಹೋಗುವ
ನಲುಗುವ ನರಳುವ ಹೊಟ್ಟೆಗಳು...

ತಟ್ಟೆಯಲಿ ತೇಲಿ ಮೇಲಾಡುವ ಹೊಟ್ಟೆಗಳ ಹಿಂದೆ
ಬಿಸಾಕಿದ ಹಸಿರೆಲೆಯ ಹುಡುಕಿ
ಕೈಬೊಗಸೆಯಲೆ ಮುಳುಗೇಳುವ ಹೊಟ್ಟೆಗಳು...

ಕಲ್ಲು ಜೊಲ್ಲು ಹೊಟ್ಟೆಗಳ ಹಿಂದೆ
ಕೈಸಿಗದೆ ಕರಗುವ
ಕಮರುವ ಕನಸಿನ ಹೊಟ್ಟೆಗಳು...

ಮುಂದುಳಿಯುವ ಮುಂದಾಳು ಹೊಟ್ಟೆಗಳ ಹಿಂದೆ
ಕೈಕೊಡವಿ ಕೈಬಿಟ್ಟ ಮೇಲೆ ಬಿದ್ದು
ಪೆಟ್ಟು ತಿನ್ನುವ ಹಿಂದುಳಿಯುವ ಮಂದ ಹೊಟ್ಟೆಗಳು

ಕಟ್ಟೆ ಕಟ್ಟಿ ಕಸಿದಿಟ್ಟ ಒಡೆಯ ಹೊಟ್ಟೆಗಳ ಹಿಂದೆ
ಹಕ್ಕ ಕೈಚಾಚಲು ಹೆದರಿ
ಒಡೆಯ ಕೈ ಕಟ್ಟಿದ ಹೊಟ್ಟೆಗಳು...

ಮೊಸರನು ಹೀರಿ ಬಿರಿಯುವ ಹೊಟ್ಟೆಗಳ ಹಿಂದೆ
ಕೈಕೆಸರನು ನೆಚ್ಚಿ ಕೂತ
ಹನಿ ನೀರಿಲ್ಲದೆ ಬಿರುಕು ಬಿಟ್ಟ ಹೊಟ್ಟೆಗಳು...

ಝಣ ಝಣಿಸುವ ಕಿವುಡು ಹೊಟ್ಟೆಗಳ ಹಿಂದೆ
ಕಾಲಡಿ ಬಿದ್ದರೂ ಕೆಳಗೆ ಬಿದ್ದ
ಕುರುಡು ಕಾಂಚಾನಕೆ ಕಿವಿ ನಿಮಿರುವ ಹೊಟ್ಟೆಗಳು...

ಅಂಟಿರದ ಒಂಟಿ ಕ್ರೂರ ಹೊಟ್ಟೆಗಳ ಹಿಂದೆ
ಸುಲುಗೆಯಲಿ ಬದುಕ ಕಟ್ಟುವ
ಅಂಜುಬುರುಕ ಜಂಟಿ ಹೊಟ್ಟೆಗಳು...

ಹುಟ್ಟು ಒಂದಿದ್ದರೂ ಹುಟ್ಟಿದಾಗ
ಹೊಟ್ಟೆಪಾಡಿನ ಪಟ್ಟು ಕಾಯುವ, ಬೇರ್ಪಡಿಸುವ,
ಸಾವಿನಲ್ಲಿ ಹೂತ ನಂತರ ಭೂತದೊಟ್ಟೆಗಳ..

ಅರಿವಾಯ್ತು ಹೃದಯ ಕೊಟ್ಟ ದೇವ, ಹೊಟ್ಟೆ ಕೊಟ್ಟು
ಬೇರೆ ಜಾಗದಲಿಟ್ಟು, ಬೇರೆ ಊಟ ಕೊಟ್ಟು,
ಬೇರ್ಪಡಿಸಿ, ಜೀವ ಹರಿಸುವ ಮೇಲಷ್ಟು ಕೆಳಗಷ್ಟು,...

ದೇವ ಕೊಟ್ಟ ಹೊಟ್ಟೆಯೊಂದೆ ಆದರೂ ಹಿಂದೆ
ಹೊಟ್ಟೆಗಳೊಡೆದು ನಂದು ನಿಂದು ಎಂದು,
ಏಕೆ ಬೇರೆ ಹೊರುವ ಈ ಜೀವಿತದ ಭಾರವ?

ರುದ್ರಪ್ಪ...

ಮಂಗಳವಾರ, ನವೆಂಬರ್ 15, 2011

ಕೈ ಕುಲುಕುವ ಬನ್ನಿ...

ಕೈ ಕುಲುಕುವ ಬನ್ನಿ...
 
 
ಕೈ ಕುಲುಕುವ ಬನ್ನಿ ಕುದುರಿದ ವ್ಯವಹಾರಕೆ,
ಕೈ ಮುಂದೆ ಮಾಡಿ ಕೈ ಜೋಡಿಸುವ ಬನ್ನಿ ಪರಿಸರಕೆ...


ತಬ್ಬಿ ಹೇಳುವ ಬನ್ನಿ, ಧನ್ಯವಾದ ಕೊಟ್ಟ ಉಸಿರಿಗೆ,
ಕೈ ಹಿಡಿದು ಸಂಧಿಗೆ ಸಹಿ ಮಾಡುವ ಹಸಿರಿಗೆ...


ರಾಜಿ ಪತ್ರದಲಿ ರುಜು ನೀಡಿ ಹಸಿರಿಗೆ ಜೀವನ,
ಕೊಟ್ಟು ಉಸಿರನ್ನು ಸಂಭಾವನೆಯಾಗಿ ಪಡೆಯೋಣ...


ಭವಿಷ್ಯದ ಉಸಿರಿನ ಜೀವ ಬಿಂದಿಗೆ ತುಂಬಿ ಇಡೋಣ,
ಉಸಿರು ಬಿಟ್ಟು ಹೋಗುವಾಗ, ಮಕ್ಕಳ ಕೈಯಿಂದ ನೀರುಯ್ಯೋಣ...


ಹಸಿರಾಗಿ ಉಸಿರ ಉಳಿದವರಿಗೆ ಹಂಚಿ ಮರಳೋಣ,
ಮಕ್ಕಳಿಗೆ ರಾಜಿಯ ನವೀಕರಿಸಿ ಹಸ್ತಾಂತರಿಸೋಣ...


ರುದ್ರಪ್ಪ...








ಭಾನುವಾರ, ನವೆಂಬರ್ 13, 2011

ಈ ಭಾರತೀಯನಾರು?




ಚಡ್ಡಿ ಮರೆತು ಕಡ್ಡಿ ಬಾವುಟ ಹಿಡಿದು 
ಧರಿಸು ಬಿಟ್ಟು ಧಿರಿಸಿನಿಂದ ಓಡುವ ಮುಗ್ಧ ಭಾರತೀಯನಾರು..?

ಗೆಲುವಿನ ಹಸಿವನ್ನು ತಣಿಸಲು 
ಬರಿಯ ಗಂಜಿಯ ಹೀರಿ ಹಿಗ್ಗುತಿಹ ಭಾರತೀಯನಾರು..?

ಸ್ಪರ್ದೆಯ ತುರ್ತು ಸ್ಥಿತಿಗೆ ದಿಟ್ಟ ಹೆಜ್ಜೆ ಹಾಕಿ   
ಭಯಪಡದೆ ಮುನ್ನುಗ್ಗುವ ಸಾಹಸಿಗ ಈ ಭಾರತೀಯನಾರು...? 

ತ್ರಿವರ್ಣಗಳ ಎತ್ತಿ ಮೆರೆಸುವ 
ಬಣ್ಣ ಬಣ್ಣದ ಜಾತಿ ಮರೆಸುವ ಭಾರತೀಯನಾರು..?

ಕೆಟ್ಟ ರಸ್ತೆಯಲಿ ಎಡವುಕಲ್ಲುಗಳ ತಪ್ಪಿಸಿ 
ಮೂಢ ಕೊಂಪೆಯಿಂದ ಹೊರಬರುವ ಭಾರತೀಯನಾರು...? 

ದಾರಿಯುದ್ದ ಜನ ಗಣ ಮನವುಬ್ಬಿಸಿ ಹಾಡಿ 
ಹಾದಿಯುದ್ಧವ ಗೆದ್ದು ಉದ್ದ ಸಣ್ಣ ಮಾಡುವ ಭಾರತೀಯನಾರು..?

ಸ್ವಾರ್ಥಾಮಿಶದಿ ಕಳೆದುಹೋದ 
ಒಗ್ಗಟ್ಟನು ಪುಸ್ತಕದ ಕಥೆ ಮಾಡಿದ ಮೂಢರಲ್ಲಿ ನಾನ್ಯಾರು? ನೀನ್ಯಾರು?  

ರುದ್ರಪ್ಪ...

ಶನಿವಾರ, ನವೆಂಬರ್ 12, 2011

ನಿನ್ನ ನೆನಪು...

ನಿನ್ನ ನೆನಪಿನ ಕವಿತೆಯೊಂದು
ನನ್ನ ಭಾವಸಾಲುಗಳ ನಡುವೆ
ಬಿಳಿಯ ಅಂತರದ
ಖಾಲಿ ಜಾಗವಾಗಿ ಉಳಿಯಿತಿಂದು...

ಕಾಣದ ಕವಿತೆಯ ಕಾಣುವ ತಪ್ಪುಗಳ
ಅಳಿಸಲು ಹೋಗಿ
ಅಳಿಸುತಿಹೆ ನನ್ನ ಭಾವಗಳ
ಅಳುವ ಅಳಕುವ ಸಾಲುಗಳ...

ಉಜ್ಜಿ ಉಜ್ಜಿ ಅಳಿಸ ಹೋಗಿ
ಕೆರೆಯದೆ ಅಳಿಯದ ಅಲುಗದ
ಭಾವಗಳ ಸಾಲುಗಳ
ಹುಣ್ಣಾಗಿ ಅಳಕುವ ನೋವುಗಳ...

ಅಡ್ಡ ದಿಡ್ದವಾಗಿ ಬಂದ ನೆನಪಿಗೆ
ನಿಲ್ಲಿಸಿ ಅಡ್ಡ ಗೆರೆಯ ಬರೆ ಎಳೆದು
ಓಡಿಸಿದರೂ ಮತ್ತೆ ಬಾರದ ಹಾಗೆ
ಬಿಡದೆ ಬೆನ್ನತ್ತಿದೆ ಜ್ವರದಿ ಕನವರಿಕೆಯ ಹಾಗೆ...

ಏನೂ ಬರೆಯದೆ ಹಾಳೆಯ
ಹರಿದು ಮಗುಚಿ ತಿರುಚಿ
ಮುದುಡಿಸಿ ಕಾಣದಂತೆ ಚೆಲ್ಲಿದೆ
ಹರಿದುಳಿದ ವಕ್ರವೂ ನಿನ್ನ ಚಂದ ನಗುವ ಚೆಲ್ಲುತಿದೆ...

ಮುಚ್ಚಿತ್ತು ಪುಸ್ತಕವ ಮತ್ತೆ
ತೆರೆಯದಂತೆ ಮೂಲೆಯಲಿ
ಕಣ್ಮುಚ್ಚಿ ಬೀಸಿದೆ ಕಾಣದ ಹಾಗೆ
ಭಾಸ! ಏನಿಲ್ಲದ ಕೈಬೆರಳ ಸಂದಿಯಲಿ ನಿನ್ನ ಬೆರಳ ಹಾಗೆ...

ಏನು ಮಾಡಲಿ ನಿನ್ನ
ನೆನಪು ಬಾರದಂತೆ
ಸೆಳೆತದ ಸುಳಿಯು ಹತ್ತಿರ ಸುಳಿಯದಂತೆ
ನಾನೆಳೆಯುವ ಉಸಿರು ಕೊಸರಾಡದಂತೆ...

ರುದ್ರಪ್ಪ...







ಎಷ್ಟೊಂದು ಬೆಳಕಿತ್ತು, ಎಲ್ಲೋಯ್ತು?






ಎಷ್ಟೊಂದು ಬೆಳಕಿತ್ತು ಹೊರಗೆ, ಒಳಗಿಲ್ಲ...
ಕರೆಂಟ್ ಹೋಗಿ ಕತ್ತಲಾಗಿತ್ತು ಒಳಗೆಲ್ಲ...
ಹೋಗಿ ಹೊತ್ತಾಯ್ತು ಇನ್ನೂ ಕರೆಂಟ್ ಬಂದಿಲ್ಲ...
ಹೊರಗೆ ಸುರಿಯುವ ಬೆಳಕ, ಬೊಗಸೆ ಹಿಡಿಯಲ್ಲಿಲ್ಲ...

ಕೆಟ್ಟ ಸಮಯ ನಮ್ಮನೆಯ ನೆಮ್ಮದಿ ಕೆಡಿಸಿತು...
ಕತ್ತಲಲ್ಲಿ ಕೈ ತಡಕಾಡಿತ್ತು ಏನು ಹಿಡಿತಕೆ ಸಿಗದಿತ್ತು...
ಮೊಬೈಲ್ ಬ್ಯಾಟರಿ ತೀರಿತ್ತು ಊಹೆಗೆ ದಾರಿ ನೂರಿತ್ತು...
ಕರೆಂಟ್ ಹೋಗಿತ್ತು ನಂಬಿಕೆಯ ಜೀವ ತೆಗೆದಿತ್ತು...

ಕಂಗಳ ಅಂಗಳ ನೋಟದ ಕಳೆಯೇ ಕಳೆದಿತ್ತು
ಆ ಧ್ವನಿಯ ಗಾನ ಕರೆಂಟಿಲ್ಲದೇ ಸುಮ್ಮನಿತ್ತು
ತುಂಟ ನಗುವು ಮಾಸಿ ಬೆಳಕು ಕಳೆದಿತ್ತು
ದೇವನಿರುವ ನಂಬಿಕೆ ಮೇಣದಂತೆ ಕರಗುತ್ತಿತ್ತು



ಕಿಲಕಿಲನೆ ಉಸಿರಾಡುವ ಬತ್ತಿಯ ಜೀವ ಬತ್ತಿತು...
ಅಯ್ಯೋ!! ನನ್ನ ಜೀವ ನಿನ್ನ ಕಾಲಡಿ ಇತ್ತು
ಕೇಳುತಿಹೆ, ಯಾಕೆ ನೀಡಿದೆ ನಗುವ ಆವತ್ತು...
ಆ ನಗುವ ಮರಳಿಸದಿರೆ ನಿನಗಿದೆ ಇವತ್ತು...

ರುದ್ರಪ್ಪ...

ಏಕಾಂತದ ದ್ವೀಪ...





ನೀನಾಗು ಬಾ ನಾವಿಕ, ನಲ್ಲನೆ
ತೇಲಿಸು ಬಾ ಏಕಾಂತದ ದ್ವೀಪಕೆ ಮೆಲ್ಲನೆ,

ನಾಚಿಕೆಯ ನೀರ ಮೇಲೆ
ನಂಬಿಕೆಯ ನೌಕೆಯ ನೂಕಿ...
ಬಯಕೆಯ ತೆಳು ಪಟವ ಏರಿಸಿ
ಎಲ್ಲ ದಿಕ್ಕುಗಳ ಕಟ್ಟಿ
ಸೆಳೆದೊಯ್ಯು ನನ್ನ ದ್ವೀಪದತ್ತ ತೇಲಿಸಿ...

ನೀರಲ್ಲಿ ಪ್ರೀತಿ ಮುತ್ತುಗಳ ಹುಟ್ಟಾಕಿ,
ಹುಟ್ಟುವ ಪ್ರತಿ ಸ್ಪರ್ಶದಲೆಯೊಂದಿಗೆ
ಏರಿಳಿದು ಮೆಲ್ಲಗೆ
ದಾಟಿಸು ಬಾ ನನ್ನ
ಮಧು ಹನಿಸುವ ಜಲಪಾತದ ನಡುಗಡ್ಡೆಗೆ...

ಅಂಬಿಗನೆ ಎಳೆದೊಯ್ಯು ಬಾ ಏಕಾಂತಕೆ
ಯಾರೂ ಬರದಿರುವ ದ್ವೀಪಕೆ...

ನಂಬುಗೆ ಅಂಬಿಗ ನೀನು
ನಾಚಿ ನಡುನೀರಲ್ಲಿ ನಾನು
ಮುಖ ಮುಚ್ಚಿ ಮುಳುಗಿದರೂನು
ಕೈ ಬಿಡಿಸಿ ಜಾರದಂತೆ,
ಹಿಡಿದು ಮೇಲೆತ್ತಿ ಕರೆದೊಯ್ಯು ಬಾ ನೀನು...

ದಡ ಸೇರಿ ಇಳಿಯ ಬೇಕು-ಬೇಡಗಳ
ಓಲಾಡುವ ತಳಮಳ
ಆಯ ತಪ್ಪಿಸದಂತೆ ನಿನ್ನವಳ...
ಹಿಡಿದು ನೀನಿಳಿಸು ಬಾ
ಬೇಕೆನಿಸುವ ಭಾವಗಳ...

ಹೋಗೋಣ ಬಾ ನಲ್ಲನೆ, ಏಕಾಂತದ ದ್ವೀಪಕೆ
ನೀರ ಬಿಟ್ಟು ಮೇಲೆತ್ತುವ ಎತ್ತರಕೆ...

ರತಿಸುಖದ ಝರಿಯಿಂದ,
ಕೆಳಗಿಳಿದು ಮೇಲಿಂದ
ಸ್ವೇಚ್ಚೆಯ ತಂಪಲ್ಲಿ ಮೀಯುವಾ,
ಬಯಕೆ ನಗ್ನತೆಯ ಮೀರುತ
ಮನದಾಳದ ದಾಹವ ನೀಗಿಸುವಾ...

ಉಸಿರಾಗಿ ಜಲಪಾತದಿ ಸುರಿಯುವ
ತೃಪ್ತಿಯ ನದಿಯೊಂದು, ತುಂಬುವ-
ತುಳುಕುವ ಮೊದಲೇ
ಮಧು ಸೇವಿಸಿ ತಪ್ಪಿಸುವ
ಆಸೆ ಉಕ್ಕುವ ಪ್ರವಾಹವ...

ಬಾ ನಲ್ಲನೆ, ಏಕಾಂತಕೆ
ಸರಿಯೋಣ ಸದ್ದಿಲ್ಲದೆ ಒಂದಾಗಿ ಸೇರುವ ದ್ವೀಪಕೆ...

ರುದ್ರಪ್ಪ...

ಏಕಾಂತದ ದ್ವೀಪ...


ಒಂಟಿತನದ ದ್ವೀಪದಿ
ಕೈಬಿಟ್ಟು ಕೈಕೊಡವಿ
ಕೈಬಿಡಿಸಿಕೊಂಡು ತಳ್ಳಿಹರು ಎನ್ನ
ಒಂಟಿಯಾಗಿ ಉಳಿವ ನನ್ನ
ಸುತ್ತುವರಿದ ನೋವು ಆಳವಾಗುತಿದೆ
ನೆನೆದು ತಿರುಗಿ ನೋಡದೆ ಹೋದವರನ್ನ...



ಸುತ್ತುವರಿದ ಅಸಾಧ್ಯವ,
ನೋವಿನ ನೀರಿನ ಆಳವ
ಮತ್ತದೇ ದಡಕೆ ತಳ್ಳುವ
ನೆನಪಿನಲೆಗಳ ಎದುರಿಸಿ
ಈ ಜೀವ ಈಜಿ ದಾಟಿ ಸುಪ್ತವ
ಬಯಕೆ ದ್ವೀಪವ ಸೇರುವ ...

ದಿನ ದಿನವು ಏರುವ ನೋವ
ನೀರಲ್ಲಿ ದ್ವೀಪ ಮುಳುಗುತಿದೆ
ಜೀವ ಅರಿವಿಗೆ ಜಾಗವಿಲ್ಲದೆ ಅಸುನೀಗುತಿದೆ
ಬೇರೊಂದು ನೆಲೆಗೆ ಸೇರಬೇಕೆನಿಸಿದೆ
ಅಲ್ಲಿ ಇಲ್ಲಿ ಗಾಳಿಯಲ್ಲಿ ಕೈಬಡಿದು
ರೆಕ್ಕೆಯಿಲ್ಲದೆ ಬರಿ ಆಸೆಗಳೆ ಹಾರುತಿದೆ

ಸೆಳೆವ ಆಳದಿ ಕುಸಿಯದೇ ಈಸಿ
ಮುಟ್ಟುವಾಸೆ, ಜೀವ ಕಾಣುವ
ಬಯಕೆ ಸೇರಿ ಆಚೆ ದಡವ...
ದಿಕ್ಕಿಲ್ಲದೆ ಬಂದಿಳಿದ ದ್ವೀಪವ
ತೊರೆದು ತ್ವರನೆ ಸೇರುವ
ಏಕಾಂತದ ನಡುಗಡ್ಡೆಯ...

ಪ್ರಯತ್ನದ ಕೈಬಿಚ್ಚಿ ಕೈಬಡಿದು
ನಂಬಿಕೆಯ ಉಸಿರನ್ನು ಬಿಡದಂತೆ ಹಿಡಿದು
ನೋವಿನಾಳವ ಸಹಿಸಿ ಒಮ್ಮೆ ಜಿಗಿದು
ಬಯಕೆ ದಿಕ್ಕಲ್ಲಿ ಮನಸೋಲದೆ ಚಲಿಸಿ
ಮೇಲೆ ಕಾಣದ ಆಳ ದಾಟುವ
ಸೇರಲೊಮ್ಮೆ ಆಚೆ ದಡವ



ಬಯಸಿ ಬಂದೆ ಬಯಕೆ
ಕೈಹಿಡಿದು ಒಂಟಿಯಾಗಿ ಎಕಾಂತಕೆ
ಕಂಡು ಕೊಂಡೆ ಕಾಣಬೇಕಿದ್ದ
ನನ್ನ ನಾ ಜಂಟಿಯಾಗಿ ಇನ್ನೂ ಹತ್ತಿರಕೆ...
ಅರಿವಿಲ್ಲದೆ ಅರಿವು ಎಳೆದೊಯ್ಯುತಿದೆ
ನೀರಿಗೆ ನಿಲುಕದ ತನ್ನ ಎತ್ತರಕೆ...

ರುದ್ರಪ್ಪ...

ಭಯಪಡಬೇಡಿ





ಭಯಪಡಬೇಡಿ ಕಾರ್ಗತ್ತಲ ಕೋಣೆಯಲಿ,
ಬಣ್ಣ ಬಣ್ಣದ ಇಲಿಯಾದರೂ
ಬೆಕ್ಕಿಗೆ ಬೆಳಕಿಲ್ಲದೆ ಸಿಗಲಾರದು.
ಸದ್ದು ಮಾಡದೆ ಸಾವಿನ
ಹೊಂಚಿಗೆ ಸಂಚು ಮಾಡಿ
ಸಾರ್ಥಕತೆಯ ತಿರುಗೇಟು
ನೀಡುವುದೇ ಜೀವನ.

ಭಯಪಡಬೇಡಿ ಬೆಳಕಿದ್ದರೆ ಕೋಣೆಯಲಿ,
ಬಣ್ಣ ಬಣ್ಣದಿ ಎದ್ದು ಕಾಣುವ ಇಲಿಯಾದರೂ
ಬೆಕ್ಕಿನ ಕೈಗೆ ಸಿಗಲಾರದೆ
ಸಿಕ್ಕ ಸಂದಿ ಗೊಂದಿಯಲಿ
ಜೀವನ ಕಂಡು ಜೀವ ಹಿಡಕೊಂಡು
ಬೆಕ್ಕಿಗೆ ಸೆಡ್ಡು ಹೊಡೆಯುವುದೇ
ಸಾರ್ಥಕ ಜೀವನ...

ರುದ್ರಪ್ಪ...





ಭಾರ ತಾಳದ ಗಾಳ





ತಂತಿಯಾ ತಾಳದ ಗಾಳಕ್ಕೆ ಕಟ್ಟಿ ರಾಗವ
ಸಂಗೀತದ ನದಿಯಲಿ ತೇಲಿಬಿಟ್ಟೆ ನಾನು
ಸಿಗಬಹುದೇನೋ ಒಂದಾದರು ಕೇಳುವ ಮೀನು
ಹುಡುಕಾಡುತಿರುವೆ ನಾನು...

ಇಂಪಾದ ರಾಗ ತಾಳಗಳಿಂದ ಹೆಣೆದು
ಮೋಹದಲೆಯ ಸೆಳೆತದ ಬಲೆ ಬೀಸಿದೆ ನಾನು
ಬೀಳಬಹುದೇನೋ ಒಂದಾದರು ಒಲಿಯುವ ಮೀನು
ಕಾದು ಕುಳಿತಿಹೆ ನಾನು...

ನಿಶ್ಯಬ್ದ ಮೌನದ ಭಾವ ಹಿಡಿದು
ಕಾಲದ ಕಾಲಿನ ಮೇಲೆ ಭಾರ ಹಾಕಿ ನಿಂತಿಹೆ ನಾನು
ಸನಿಹಕೆ ಬರುವುದೇನೋ ಅರಸಿ ಅರಿಯುವ ಮೀನು
ಎದುರು ನೋಡುತಿಹೆ ನಾನು...

ಗಾಳ ಅಲುಗಾಡಿದಾಗ, ರಾಗವ ಮೇಲೇರಿಸಿ,
ಒಲಿದ ಮೀನನು ಮಿಟುಕದೆ ನೋಡಿದೆ ನಾನು
ತಾಳವೇ ನೋಟದ ಭಾರಕೆ ಮಿಡುಕಾಡುತಿದೆಯೇನು?
ಸಂಗೀತವ ಮರೆಯುತಿಹೆ ನಾನು...

ರುದ್ರಪ್ಪ...















ಅವ್ವಾ...



ಅವ್ವಾ...


ಯಾರಂತ ನಾ ಮರತೇನಿ,
ಬರೀ ಅಕಿ ದನಿಯಾಗ
ಮತ್ತ ಮತ್ತ ನಾ ಸುಳದೇನಿ...

ಬಿಸಿ ಬಿಸಿ ಎಣ್ಣ್ಯಾಗ
ತಪ ತಪ ತಲಿಗೆ ತಂಪ ಬಡಿದು
ಎರದಾಳೋ ವಾತ್ಸಲ್ಯ ಮೈಮ್ಯಾಗ...

ಮಧ್ಯಾಹ್ನದ ದನಿ ಸುಳದದ
ಬಾರೋ ಉಣ್ಣಾಕ
ತೀರದ ಉಪಚಾರದ ಊಟಕ...

ಹಣ್ಣು ಸಿಪ್ಪೆಯ ಸುಲದೇನಿ
ಪ್ರತಿ ಹೋಳ ಮ್ಯಾಗ
ಇವತ್ತೂ ಅಕಿ ಬೆರಳ ನಾ ಕಂಡೇನಿ...

ಮ್ಯಾಗ ಹರಿದಾಡೋ
ಅವಳ ಕೈಬೆರಳ ನಿದ್ದಿ
ಮಮತೆ ಉಂಡ ಮೈಯೆಲ್ಲಾ ಮುದ್ದಿ...

ಮಲ್ಕೊಂಡು ಆಡೋ ಕನಸ್ನ್ಯಾಗ
ಇವತ್ತೂ ನಾ ಅವ್ವಾ ಅಂತೇನಿ
ಪ್ರತಿ ಸಲ ನಾ ಎಡವಿದಾಗ...

ರುದ್ರಪ್ಪ....





ಆರೆಳೆಯ ಜನಿವಾರ...



ಆರೆಳೆಯ ಜನಿವಾರವ
ಎಳೆವ ರಾಗದಿ ಎಳೆದು ಕಟ್ಟಿ
ಮಂತ್ರ ನಾದದಲಿ ನುಡಿಸುವ ಬಾರಾ ಈ ಆತ್ಮವ

ಸುಧೆಯೊಂದು ಏರಿ
ಮೇಲೇರಿ ಮೈಮರೆತು
ತಾಕಿಸುವ ಬಾರಾ ಅವನಿತ್ತ ಪಾದವೇರಿ

ತಲೆದೂಗುವ ಸಂಗೀತ
ಬೆನ್ತಟ್ಟುವ ಚಪ್ಪಾಳೆ ಚಿಟಿಕೆಗಳ ಹಿಡಿದು
ತೃಪ್ತಿಸುವ ಬಾರ ಅವನೆದರು ತಲೆಬಾಗುತ

ಬಲಗೈ ಜನಿಸಿದ ಬಿಟ್ಟರೆಳೆವ ರಾಗ
ಇನ್ನಿಲ್ಲದಂತೆ ಎಡಗೈ ಬೆರಳಲಿ
ತುಂಡರಿಸುವ ಬಾರಾ ದೇವಗೆ ಬೇಡದ ಭಾಗ

ಎರಡು ಕೈಗಳ ತಾಕಿಸಿ
ಅವನತ್ತ ಜೋಡು ಸ್ವರದಿ
ನಮಿಸುವ ಬಾರಾ ನಾಕು ಎಳೆಯ ನುಡಿಸಿ

ಎದೆಗವಚಿ ಹಿಡಿಸಿ
ಎದೆ ಬಡಿತದಲೆಗಳು ಮೇಲೆ ಕೆಳಗಾಗದಂತೆ
ಸೇರಿಸುವ ಬಾರಾ ಅವನಿರುವಲ್ಲಿಗೆ ಹರಿಸಿ...

ಆರೆಳೆಯ ಜನಿವಾರ
ಬೆರಳಿಂದ ಎಳೆಯುವ ಬಾರಾ
ಭಕ್ತಿ ಕುಣಿತದ ತಾಳಕೆ ನುಡಿಸಿ ಇಳಿಸುವ ಭಾರ...

ರುದ್ರಪ್ಪ...









ಏಕೆ?.. ಹೇಳಿ ಏಕೆ?





ಹಸಿದ ಹೊಟ್ಟೆಗಳು
ಹಸಿರೆಲೆಯ ಮೇಲೆ ಉಳಿದನ್ನದಲಿ
ಹರಿದಾಡುವಾಗ ಕಣ್ಮುಚ್ಚುವಿರಿ ಏಕೆ?
ಕಣ್ಬಿಟ್ಟು ಒಮ್ಮೆ ನೋಡಬಾರದೇಕೆ?

ಹೊರೆಯಾದ ಹೊಟ್ಟೆಪಾಡಿನ
ಹರೆಯವ ಕೆಂಪು ಬಣ್ಣದ ಬೆಳಕಿನ
ಮಡಿಲಲಿ ಮಲಗಿದ್ದು ಕಂಡು ಕಣ್ಮುಚ್ಚುವಿರಿ ಏಕೆ?
ಕಣ್ಬಿಟ್ಟು ಒಮ್ಮೆ ನೋಡಬಾರದೇಕೆ?

ಊಣ ಅಂಗಗಳ ಹೊತ್ತು
ರೋಗದಿಂದ ಬೇಸತ್ತು ಆಸರೆಯ ಕೇಳಿ ಕಾಸಿಗೆ
ಚಾಚುವ ಕೈಗಳ ನೋಡಿ ಕಣ್ತಿರುವಿ ದೂರ ನೂಕುವಿರೇಕೆ?
ಒಮ್ಮೆ ಕೈ ಹಿಡಿದು ನೋಡಬಾರದೇಕೆ?

ತೊಟ್ಟಿಯಲಿ ಬೇರೊಬ್ಬರ ತಪ್ಪನು ಹೊತ್ತು
ಕಸದಲ್ಲಿ ಮುಳುಗದೆ ಈಜಲು ಕೈ ಕಾಲು ಬಡಿಯುವ
ಕಂದಮ್ಮನ ಕಂಡು ಕಣ್ಮುಚ್ಚುವಿರಿ ಏಕೆ?
ಕಣ್ಬಿಟ್ಟು ಮಾನವೀಯತೆಯ ಮೆರೆಯದಾದಿರೇಕೆ?

ದ್ವೇಷ ಅಸೂಯೆಗಳ ಆರದ ಬೆಂಕಿಯಲಿ
ಸುಟ್ಟು ಕರಕಲಾಗಿ ಬೂದಿಯಾಗಿ
ಗಾಳಿಗೆ ಹಾರುವ ದೇಹಗಳ ಕಂಡು ಕಣ್ಮುಚ್ಚುವಿರೇಕೆ?
ಕಣ್ಬಿಟ್ಟು ಸೌಹಾರ್ದದ ತಂಪನೆರಚಿ ಆರಿಸದಾದಿರೇಕೆ?

ಕಣ್ಣು ಕಾಣದೆ ಬೆಳಕಿನಲಿ
ಕಾಣದ ಕೈ ಹುಡುಕುವ
ಹೃದಯಗಳ ಕಂಡು ಕೈಕಟ್ಟಿ ನಿಲ್ಲುವಿರೇಕೆ?
ಕೈ ಬಿಚ್ಚಿ ಕೈ ಹಿಡಿದು ಎರಡೆಜ್ಜೆ ದಾಟಿಸದಾದಿರೇಕೆ?

ದೂರ್ತ ದುಷ್ಟ ದಾನವ ಮೌಲ್ಯಗಳ
ನಡುವೆ ನಲುಗುವ ಮಲಗುವ
ಮನಸುಗಳ ಕಂಡೂ ತುಂಬು ಹೊದ್ದು ಮಲಗುವಿರೇಕೆ?
ಒಮ್ಮೆ ಮೌಲ್ಯದ ಮುಸುಕು ತೆಗೆದು ನೋಡಬಾರದೇಕೆ?

ರುದ್ರಪ್ಪ...







ನನ್ನ ಕನ್ನಡ ...



ಅಂದು ಕಲಿಕೆಯು ಕಣ್ಬಿಟ್ಟಾಗ 
ಕಾ ಗುಣಿತಗಳ ಕುಣಿತ
ಕಣ್ ಕಣ್ ಬಿಟ್ಟು ನೋಡಿ
ಸದ್ದಿಲ್ಲದ ಕುಣಿತ ಮಾಡಿತ್ತು ಮೋಡಿ

ಸ್ಲೇಟು ಬಳಪಗಳ ಚಾಟಿ ಹಿಡಿದು,
ತೀಡಿ ತಿದ್ದಿ ಪಳಗಿಸಿ,
ಅಪ್ಪ ಅಮ್ಮನ ಕೈ ಹಿಡಿದು ನಾ ನಡೆದು,...
ಕುಣಿತಗಳ ತಾಳಕ್ಕೆ ರಾಗವಾದೆ,
ಕಣ್ಮುಚ್ಚಿ ಕೂಡ ತಪ್ಪುಗಳ ಎಡವದೆ,
ದಾರಿ ನೇತಾರ ವ್ಯಾಕರಣವ ತಡವದೆ...

ಅಕ್ಷರಗಳೊಡನಾಡಿ ಪದವೆಂದಾಗಿ
ಪದಪದ ಕೂಡಿ ವಾಕ್ಯವೆಸಗಿ
ವಾಕ್ಯಗಳೆಲ್ಲ ಸೇರಿ ಭಾಷೆಯಾಗಿ
ಭಾವ ಅರಗಿಸಿ ಅಡಗಿಸಿ
ಹರಿಯುತಿದೆ ಹೃದಯದಿಂದ ಹೃದಯಕೆ ಸರಾಗವಾಗಿ
ತಡಮಾಡದೆ ಸುಲಲಿತವಾಗಿ

ಅಂಧಕಾರವ ಸೀಳಿ ಬಿಳಿಯ ಅಕ್ಷರ ದೀಪಗಳು
ಒಂದೊಂದೇ ಬೆಳಗುತಲಿದ್ದವು
ಜೊತೆಯಾಗಿ ಮನದಲ್ಲಿ ಅಕ್ಷರಗಳ ಝೇಂಕಾರವು
ಅಕ್ಷರತೆಯ ದಾರಿಗೆ ಓಂಕಾರವಾಗಿತ್ತು

ಇದು ಬರೆಯಬಲ್ಲವನ ಕನ್ನಡ
ಇದು ಓದಬಲ್ಲವನ ಕನ್ನಡ
ನೋಡ ಇದು ನನ್ನ ಕನ್ನಡ
ನೋಡ ಇದು ನಿನ್ನ ಕನ್ನಡ...

ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು...

ರುದ್ರಪ್ಪ...






ಮನಶಾಂತಿ



ತುತ್ತ ತುದಿಯಲ್ಲಿ ಬಂದು ನಿಂತ ಕನಸುಗಳು, 
ಮನಶಾಂತಿಯ ಮೆಟ್ಟಿಲಿಲ್ಲದೆ ಜಾರಿ ಕೆಳಗೆ ಬೀಳುತಿವೆ...
ಜಾರುವ ಜಾರಿಕೆಯ ಹಿಡಿದು ಹತ್ತಲು,
ಸುತ್ತಲು ಕವಿದ ಕತ್ತಲು ಕೈ ಕೊಡವುತಿದೆ...

ಕೈಬೆರಳುಗಳ ನಡುವೆ ತಿರುಗಿ ಕೊನೆಯ ತುತ್ತೊಂದು
ತಟ್ಟೆ ಮೂಲೆಯ ಹುಡುಕುತಿದೆ ಮೊಗದಲ್ಲಿಯ ತಾತ್ಸಾರವ ಕಂಡು...
ಬೆನ್ನಟ್ಟಿ ಬೆರಳುಗಳು ಹಿಡಿದೆತ್ತಿ ಕೇಳಿದಾಗ ಜಾರಿಕೊಂಡಿತು
ನೆವ ಹೂಡಿ ಕೈ ಮಾಡಿ ಹೊಟ್ಟೆ ಹೃದಯ ಭಾರವಾಯಿತೆಂದು...

ನೀರಡಿಸಿ ನುಂಗುತಿದ್ದ ಬೊಗಸೆ ನೀರಿನ ಕೊನೆಯ ಗುಟುಕೊಂದು
ಗಂಟಿಲಿಳಿಯದೆ ಮರಳಿ ಬರುತಿದೆ ಅಶಾಂತಿಯ ಕಣ್ಣಿಂದ ಕಂಡು...
ತಡೆದು ಏಕೆ ಮರಳಿದೆ ಎಂದಾಗ ಹೇಳಿತು, ಓಡುತಿಹೆ
ಒಳಗಿನ ಬಿಸಿಗೆ ಎಲ್ಲಿ ಸುಟ್ಟು ಆವಿಯಾಗುವೆ ಅಂತ ಹೆದರಿಕೊಂಡು...

ನಿದ್ದೆಯುತ್ತುಂಗದ ಕೊನೆಯ ಕನಸೊಂದು
ತಡಬಡಿಸಿ ಗಾಬರಿಯಲಿ ಎಬ್ಬಿಸುತಿದೆ ನಿದ್ದೆಕೆಡಿಸಿ...
ಹಾರಿ ಹೋಗುತಿದ್ದ ಕನಸೊಂದು ನೆನಪಿಂದ ಹಿಡಿದು ಕೇಳಿದಾಗ ಹೇಳಿತು
ಒಳಗೆ ಅಶಾಂತಿಯೊಂದು ಕನಸೆಲ್ಲವ ಹಿಡಿದು ನುಂಗುತಿದೆ ನುಚ್ಚು ನೂರಾಗಿಸಿ...

ಬೆರಳುಗಳೆರಡರ ನಡುವೆ ತುದಿಯಲಿ ಕೊನೆಯುಸಿರ ಧೂಮವೊಂದು
ಅಲ್ಲಿ ಇಲ್ಲಿ ಬಡಿದು ಕೆಮ್ಮಿಸಿ, ರಭಸದಲಿ ಹೊರಬರುತಿದೆ
ಹೊರಬಂದ ಹೊಗೆಯ ಹುಬ್ಬೇರಿಸಿ ಕೇಳಿದಾಗ ಹೇಳಿತು
ಒಳತುಂಬಿದ ಅಶಾಂತಿಯ ಹೊಗೆಯಲ್ಲಿ ಕಳೆದು ಹೋಗುವೆನೆಂಬ ಭಯವಾಗುತಿದೆ..

ಕೊನೆಯ ಸಾಲಿಗೆ ಬಂದು ನಿಂತ ಕವಿತೆಯೊಂದು
ಸೊಂಟದ ಮೇಲೆ ಕೈಯಿಟ್ಟು ನಿಂತಿದೆ ಭಾವಪೂರ್ಣವಿಲ್ಲವೆಂದು...
ಕಷ್ಟಬಿದ್ದೆ, ದುಡಿವ ಪದಗಳ ಸಾಲಿಗೆ ಎಳೆದು ತರಲು
ಮುಖವೂದಿಸಿ ಕುಳಿತಿಹವು ಸಿಗುವ ಮಾನದ ಸಂಬಳ ಸಾಲದೆಂದು...

ರುದ್ರಪ್ಪ...





ಬದುಕು ಬೊಗಸೆ


ಹೆಜ್ಜೆ ಗುರುತು...







ನಿನ್ನ ಹೆಜ್ಜೆ ಗುರುತಿಟ್ಟು,
ಹೋದೆಯಾ ನನ್ನ ತಳ್ಳಿಬಿಟ್ಟು ...

ಆಳದಿ ಬಾಯಾರಿ ನಿಂತ ಗುರುತುಗಳ,
ತಣಿಸಲು ಸುರಿಯುವ ಕಣ್ ಹನಿಗಳ,
ಎಷ್ಟು ಹರಿಸಿದರು ಮತ್ತೆ ಮತ್ತೆ ಉಕ್ಕುತಿಹವು,
ಬಿಡದೆ ಕೆನ್ನೆಯಿಂದ ಜಾರಿ ಎದೆಗಿಳಿಯುತಿಹವು ...

ಒಮ್ಮೆ ಹೆಜ್ಜೆಗಳ ಮೆಲ್ಲನೆ ಸ್ಪರ್ಶಿಸಿ ನೋಡಲೇ,
ಕಣ್ ಹನಿಗಳು ಕೈಸಿಗದಂತೆ ಅಳಿಸುವ ಮೊದಲೇ,
ಸುಖ ಸಾಕು ಎನ್ನಿಸುತಿದೆ ನೋಡುವ ನೋಟದಲೆ...
ಭಯವಿದೆ, ಅಳಿಸಿ ಹಾಕಿದರೆ ಅದರುವ ಕೈಗಳೆ!

ತಿರುಗಿ ನೋಡದೆ ಹೋದೆಯಲ್ಲ ನಿನ್ನ ಹೆಜ್ಜೆ ಬಿಟ್ಟು,
ಕಳೆದು ಮಂಕಾಗಿಹೆ ಬೇರೇನೂ ಕಾಣದಷ್ಟು,
ಹೆಜ್ಜೆ ಹೆಜ್ಜೆಗೂ ನಿನ್ನ ಗೆಜ್ಜೆಯ ಕನಸು,
ಏನು ಕಾಣದ ಕಿವಿಯಲಿ ಕೂಡ ನಿನ್ನದೇ ಕನಸು...

ಮರಳಿ ಬಾರೆ ಗುರುತಿನ ಮೇಲೆ ಹೆಜ್ಜೆಯಿಟ್ಟು,
ಮತ್ತದೇ ಗೆಜ್ಜೆಯ ಕೇಳಬೇಕೆನಿಸುತಿದೆ ಕಿವಿಯಿಟ್ಟು...

ರುದ್ರಪ್ಪ...