ಶುಕ್ರವಾರ, ಡಿಸೆಂಬರ್ 23, 2011

ಕವಿಯಲ್ಲ ನಾನು...ಭಾವ-ಸ್ಪರ್ಶ ಜೀವಿ...

ಕವಿಯಲ್ಲ ನಾನು...ಭಾವ-ಸ್ಪರ್ಶ ಜೀವಿ...

ಕವಿ ಕವಿ ಕವಿ ಎಂದು
ಕಿವಿ ತುಂಬದಿರಿ ಮನಗಳೆ
ನಾನಿನ್ನೂ ಕೇಳಬೇಕು
ಜುಳು ಜುಳಿಸುವ ನೀರನು,
ಸುಯ್ ಗುಡುವ ಗಾಳಿಯ,
ಚಿಲಿಪಿಲಿಸುವ ಹಕ್ಕಿಗಳ,
ನಿನಾದಿಸುವ ದೈವ ಘಂಟೆಗಳ,
ಅವಳು ಗುನು-ಗುನಿಸುವ ಹಳೆಯ ಹಾಡುಗಳ...

ಕವಿ ಕವಿ ಕವಿ ಎಂದು
ಶಾಲು ಹೊದಿಸದಿರಿ ಮನಗಳೆ
ನಾನಿನ್ನೂ ಸ್ಪರ್ಶಿಸಿ ನೋಡಬೇಕು
ಬೆಳಗಿನ ಬಿಸಿ ಬಿಸಿ ಎಳೆಬಿಸಿಲನು,
ಎಲೆಯ ಮೇಲೆ ಮೈಕಾಸುವ ಇಬ್ಬನಿಯ ತಂಪನು,
ಎಲ್ಲಿದೆ ಎಂದು ಹುಡುಕಿಸುವ ಮಂಜಿನ ತಂಪನು,
ಕರ್ಪೂರದಾರತಿಯ ಬಿಸಿಯನು,
ಭಾವ ತುಂಬಿದ ಅವಳ ಬಿಸಿಯಂತರಂಗವನು...

ಕವಿ ಕವಿ ಕವಿ ಎಂದು
ಮೂಗು ಹಿಡಿದು ಉಸಿರ ಕಟ್ಟದಿರಿ ಮನಗಳೆ
ನಾನಿನ್ನೂ ಅನುಭವಿಸಬೇಕು
ಘಮ ಘಮಿಸುವ ಮಲ್ಲಿಗೆಯ,
ಅಮ್ಮನ ಬಿಸಿ ಸಾರಿನ ಕಂಪಿನಲೆಯ,
ಹನಿ ಹನಿಗೆ ತೊಯ್ದ ಮಣ್ಣಿನ ವಾಸನೆಯ,
ನನ್ನದೆನ್ನಿಸುವ ಶ್ರೀಗಂಧದ ಸುಗಂಧವ,
ಅವಳೆನ್ನಿಸುವ ಅವಳ ಹತ್ತಿರದ ಪರಿಮಳವ...

ಕವಿ ಕವಿ ಕವಿ ಎಂದು

ಎನ್ನ ಬಾಯಿ ಕಟ್ಟದಿರಿ ಮನಗಳೆ
ನಾನಿನ್ನೂ ಸವಿಯಬೇಕು
ನನ್ನಮ್ಮನ ಕೈತುತ್ತಿನ ಅನ್ನವ,
ಹೀರಿ ಕೂಡಿಟ್ಟ ಸಿಹಿ ಜೇನು ತುಪ್ಪವ,
ಬಾಯಾರಿದಾಗ ಸಿಹಿ ಕಾವೇರಿಯ ಮುದವ,
ಭಕ್ತಿ ತುಂಬಿದ ದೈವ ತೀರ್ಥ ಪ್ರಸಾದವ,
ಮರೆಯದ ಅವಳ ಮುತ್ತಿನ ಮರೆಯ ಮಧುವ..

ಕವಿ ಕವಿ ಕವಿ ಎಂದು
ಎನ್ನ ಕಣ್ಣು ಕಟ್ಟದಿರಿ ಮನಗಳೆ
ನಾನಿನ್ನೂ ನೋಡಬೇಕು
ಕತ್ತಲನು, ಅದ ಗರ್ಭದ ಬೆಳಕನು,
ಇಳೆಯು ಹೊದ್ದ ಕಣ್ತಣಿಸುವ ಹಸಿರನು,
ನನ್ನ ಮೊಗಕಂಟಿದ, ಆ ನಿಮ್ಮ ನಗುವನು,
ನಾನರಿಯದ ಭಕ್ತಿ ದಾರಿಯ ಸೊಬಗನು,
ಕಣ್ಮುಚ್ಚಿದರು ಕಣ್ಮುಂದೆ ಬರುವ ಅವಳ ಬಣ್ಣವನು...

ಕವಿ ಕವಿ ಕವಿ ಎಂದು
ಕೈಕಟ್ಟಿ ನಿಲ್ಲಿಸದಿರಿ ಮನಗಳೆ
ನಾ ಬರೆಯಲೆಬೇಕು
ಒಮ್ಮೆಲೇ ಬಂದು ಬೀಳುವ ಕನಸುಗಳ,
ಕೊನೆಯಿರದ ಕಣ್ಣಿಗೆ ಕಾಣದ ಕಲ್ಪನೆಗಳ,
ನನ್ನವರ ಕುರಿತು ಕಂಡ ಆಶಯಗಳ,
ಅದಮ್ಯ ಶಕ್ತಿಯ ಸ್ಫೂರ್ತಿ ಚಿತ್ರಗಳ,
ನೋವುಂಡ ಮನಗಳ ಔಷಧಿ ಚೀಟಿಗಳ...

ರುದ್ರಪ್ಪ...ಭಾವದ ದೃಷ್ಟಿಕೋನ: ನಾನೊಬ್ಬ ಕವಿ ಎಂದು ಕವಿಯಾಗುವ ಮುನ್ನವೇ ಕರೆಸಿಕೊಂಡು ಬೀಗುವದು ಮನೆಯ ಹೊಸ್ತಿಲಲ್ಲೇ ಎಡವಿ ಬಿದ್ದಂತೆ. ಕರೆಯುವವರು ಕರೆಯಲಿ, ಅದೇ ಕಿವಿ ತುಂಬಿದರೆ, ನಾವು ಕೇಳಬೇಕಿರುವದು ಕೇಳುವದಿಲ್ಲ, ಕಣ್ಣು ಕಟ್ಟಿದರೆ ನೋಡಬೇಕಿರುವದು ಕಾಣಿಸೋಲ್ಲ, ಕೈ ಕಟ್ಟಿದರೆ ಸ್ಪರ್ಶಿಸಬೇಕಾಗಿದ್ದು ಮುಟ್ಟಲು ಆಗುವದಿಲ್ಲ, ಉಸಿರುಗಟ್ಟಿದರೆ ಸುತ್ತಲೂ ಪರಿಮಳವಿದ್ದರೂ ಗುರುತಿಸಲಾಗುವದಿಲ್ಲ, ಇದೆಲ್ಲದರಿಂದ ಭಾವ ಒಡೆದು ಹೊರಬರದಿರೆ ಎಷ್ಟು ಬರೆದರೂ ಅದು ಕವಿತೆಯಾಗೋಲ್ಲ... 
ಸ್ವಲ್ಪ ಇದರ ಸ್ಫೂರ್ತಿಯ ಬಗ್ಗೆ ಹಂಚಿಕೊಳ್ಳಲು ಇಷ್ಟ ಪಡುತ್ತೇನೆ : ನನ್ನ ಮಿತ್ರನೊಬ್ಬ ವಿದೇಶದಿಂದ ಮರಳಿ ಬಂದ. ನನ್ನ ಕವಿತೆಗಳ ಕಾಲೇಜು ದಿನಗಳಿಂದ ಓದಿ ನಿಯತ್ತಿನ ನಿಷ್ಟುರ ವಿಮರ್ಶೆ ಮಾಡಿ ಬರವಣಿಗೆ ಬೆನ್ನು ತಟ್ಟಿದವರಲ್ಲಿ ಒಬ್ಬ. ಮೊನ್ನೆ ಮಾತಾಡುವಾಗ " ಈ ವರ್ಷದ ನಿನ್ನ ಸಾಧನೆ ಕವಿಯಾಗಿ ಪರಿವರ್ತನೆ ಆಗಿದ್ದು, ಕವಿ ಪುಂಗವ ಕವಿ ಸಾಮ್ರಾಟ... (ಮತ್ತೇನೇನೋ ಹೇಳಿದ್ದ , ನಾ ಕಿವಿ ಮುಚ್ಚಿಕೊಂಡಿದ್ದೆ) ಜಹಾಪನಾ ತೊಫಾ ಕಬೂಲ್ ಕರೋ" ಎಂದ. ಆಗ ಸ್ವಲ್ಪ ಮುಜಗರವೆನಿಸಿದರು ಮುಕ್ತವಾಗಿ "ನಾನೇನು ಕವಿಯಲ್ಲ ಇನ್ನು ಚಿಕ್ಕ ಬರಹಗಾರ" ಎಂದೆ, ಆಮೇಲೆ ವಿಷಯ ಬದಲಾಯಿತು,,, ಮನೆಗೆ ಬಂದ ಮೇಲೆ ನಾ ಏಕೆ ಕಿವಿ ಮುಚ್ಚಿಕೊಂಡೆ ಎಂದು ಸ್ವಲ್ಪ ವಿಚಾರ ಮಾಡಿದೆ, ಇದರ ಬಗ್ಗೆ ಬರೆಯಬೇಕೆನಿಸಿತು ... ಸ್ವಲ್ಪ ಹೊತ್ತಿನಲ್ಲಿ ೫ ಚರಣಗಳ ಪಂಚ ಇಂದ್ರಿಯಗಳ ಜ್ಞಾನಕ್ಕೆ ಸಮ ಮಾಡಿ ಬರೆದು ಮಲಗಿದೆ, ಬೆಳಗ್ಗೆ ಎದ್ದು ಕಚೇರಿಯ ವಾಹನ ಹತ್ತಿ ಕೂತಾಗ ಏಕೋ ನಿದ್ದೆ ಬರದೆ ಬರೆದ ಸಾಲುಗಳ ಬಗ್ಗೆ ಮೊಬೈಲಿನಲ್ಲಿ ತೆಗೆದು ಮತ್ತೊಮ್ಮೆ ಓದಿದೆ, ಮುದವೆನಿಸಿತು... ಆದರೆ ಕೊನೆಯ ಸಾಲುಗಳು "ಎಲ್ಲೋ ಏನೋ ಉಳಿದಿದೆ ವಿಚಾರ ಮಾಡು" ಎನ್ನುತ್ತಿದ್ದವು. ತಲೆಗೆ ವಿಚಾರ ಬಂತು, ಭಾವ ಜೀವಿ ಬರಹಗಾರನಿಗೆ ಪಂಚೇಂದ್ರಿಯಗಳ ಬಿಟ್ಟು ಇನ್ನೊಂದು ಅತೀಂದ್ರಿಯ ಶಕ್ತಿ ಇರುತ್ತದೆ. "ಬರೆಯಬೇಕೆಂಬ ಹಂಬಲ". ಅದನ್ನು ಕೂಡ ಆರನೇ ಚರಣದಲ್ಲಿ ನಿಯಮಿಸಿ ಇಳಿಸಿಬಿಟ್ಟೆ. ಆಗ ಸ್ವಲ್ಪ ಸಮಾಧಾನವಾಯಿತು.

ಶುಕ್ರವಾರ, ಡಿಸೆಂಬರ್ 16, 2011

ವಿಚ್ಛೇದನ : ಜಾಣರ ಕೈಯೊಳಗಿನ ಜಾಗಟೆ...

ವಿಚ್ಛೇದನ : ಜಾಣರ ಕೈಯೊಳಗಿನ ಜಾಗಟೆ...

ಮೌನ ಇಬ್ಬಾಗವಾಗಿ
ಎರಡಾಗಿ ಕವಲಿನಲಿ
ಹಣೆಯಿತ್ತಿದೆ ಮೊಣಕಾಲಿನ ನಡುವಲಿ...

ಜಾಣರು ಚೌಕಾಸಿ ಮಾಡಿ
ಬೆಲೆ ಕೊಟ್ಟು ಕೊಂಡ ಕೊಡುಗೆ
ತಂದ ಮೌಲ್ಯಗಳ ಕವಲಿನಲಿ ಮೆರವಣಿಗೆ...

ತೇರಿನ ಗಾಲಿಗಳ ಮೇಲೆ
ಅಲ್ಲೊಂದು ಜೀವ ಇಲ್ಲೊಂದು ಜೀವ
ಕೀಲು ಕಳಚಿ ಉರುಳುವ ...

ಎರಡು ಕೈಯೊಳಗಿನ
ಒಂಟಿ ಘಂಟೆ ಜಾಗಟೆಗಳೇ ಸ್ವಲ್ಪ ಸದ್ದು
ಒಂಟಿ ಮೌನ ಇನ್ನುಳಿದದ್ದು...


ರುದ್ರಪ್ಪ...

ಬುಧವಾರ, ಡಿಸೆಂಬರ್ 14, 2011

ಕಪ್ಪು ಅಪ್ಸರೆ...

ಕಪ್ಪು ಅಪ್ಸರೆ...

ನನ್ನಾಸೆಗೆ ಜೋತುಬಿದ್ದ ಕಪ್ಪು ಅಪ್ಸರೆ
ಕದ್ದು ಸೆರಗಿನಲ್ಲೆ ಮುಚ್ಚಿ
ಹೊತ್ತು ಬರುವಳು ಮತ್ತು ಬರುವ ಮದಿರೆ...

ತೆಳು ಮೈಮಾಟದ ಮಾಟಗಾತಿ
ಚಳ ಚಳ ಸದ್ದಿನಲಿ
ಆಸೆ ಮೂಡಿದಾಗ ಕೈಬೆರಳ ಸಂಗಾತಿ...

ಗುಟ್ಟು ಬಿಟ್ಟುಕೊಡದ ಗುಪ್ತಚಾರಿಣಿ
ಅಲ್ಲಿ ಇಲ್ಲಿ ಕದ್ದು ಮುಚ್ಚಿ
ಮನೆ-ಮನ ಸೇರುವ ನಿಶೆಯ ಮಂದಾಕಿನಿ...

ಅವಳ ನೋಡಿ ಆಸೆ ಪಟ್ಟವರಿಗೆ
ಕೈನೀಡಿ ಕೈಬಿಗಿದು
ಮನೆ ಸೇರುವಳು ಪಟ್ಟದ ರಾಣಿಯ ಹಾಗೆ...

ಅಪ್ಸರೆ ಹೊತ್ತ ಅಮಲು
ಕಳಚಿದಾಗ ತೊಟ್ಟ ಆ ಕಪ್ಪು ಬಟ್ಟೆ
ನೋಡುವರ ಮೈಮೇಲೆ ಏರಲು...

ನಿಲ್ಲದ ಸುರಾಪಾನ
ಸುರಿಸುತ ಮುದವನ್ನ
ಒಳಹೊಕ್ಕು ಹುಟ್ಟಡಗಿಸಿದೆ ದುಃಖವನ್ನ...


ರುದ್ರಪ್ಪ.. .

ನಿಶ್ಯಬ್ದ ಪಯಣ ...

ನಿಶ್ಯಬ್ದ ಪಯಣ ...


ಹೊರಟ ರೈಲಿನಲ್ಲಿ
ತಳ್ಳುವ ನೂಕುವ
ಜನಜಂಗುಳಿಯ ನಡುವೆ
ಹೋರಾಟ ಮಾಡಿ
ಯಾವ ಡಬ್ಬಿಯೆಂದು ನೋಡದೆ
ಎಲ್ಲರನು ದಬ್ಬಿ ಹತ್ತಿಹೆ ,..

ನಿಲ್ದಾಣ ಬೇಡದ
ನಿರಂತರ ಪಯಣಿಗ
ನಿಲ್ಲದ ಪಯಣದ
ಅತ್ತಿತ್ತ ನೋಡದೆ
ಹವ್ಯಾಸದ ಗಂಟು ಹೊತ್ತು
ಕಾಯ್ದಿರಿಸದೆ ಡಬ್ಬಿಯೇರಿಹೆ...

ಇದ್ದ ಡಬ್ಬಿಯೊಳಗೆ,
ಇರುವಷ್ಟರಲ್ಲಿ

ನೋಡಿ ಆನಂದಿಸಿ,
ಅನುಭವಿಸಬೇಡಿ!
ಉಸಿರಾಡಿದಿರೋ ಜೋಕೆ?
ಎನ್ನುವ ಫಲಕವೊಂದಿದೆಯೇಕೆ?

ಅಭೆಧ್ಯ ನಿಷ್ಟುರ ನಿಶ್ಯಬ್ದ,
ಚುಟುಕು ಪೋಲಿಗಳಿಗೆ
ಸಂಬದ್ದ ಪಾಠ ಹೇಗೆ ಹೇಳೀತು?
ಈ ರೌರವ ಮೌನ,
ನಿರಂತರ ಮಾತಾಡುವ ಜನಕೆ
ಸಮಾಧಾನ ಹೇಗೆ ಹೇಳೀತು?

ಕಂಡ ಹಸಿರನ್ನೆಲ್ಲ
ಅದು ಹುಲ್ಲು
ಅದು ಪಾಚಿ
ಎನ್ನುವ ಮನಸ್ಸು
ಬಣ್ಣವೇ ನೀ ಮಾತಾಡಬೇಡ

ಎನ್ನುವ ಕೆಂಭೂತದ ಮಾತು ಹೇಗೆ ಕೇಳೀತು?

ಇಳಿಯಲು ಸರಪಳಿ ಎಳೆದು
ಇಳಿಯಬಾರದ ಜಾಗದಲಿ ಇಳಿದರೆ
ನಿಲ್ಲಲಾರದ ಜಾಗದಲಿ

ಇಳಿದ ಡಬ್ಬಿಯ ಎಳೆಯಲು,
ಜೊತೆಗೆ ನಿಂತ ಡಬ್ಬಿಗಳೆಷ್ಟು?
ಕೂಡಿಸುವ ಕೊಂಡಿಗಳೆಷ್ಟು?

ಹೊತ್ತೊಯ್ಯುವ ಹಳಿಗಳೆಷ್ಟು ?
ಮೇಲುರುಳುವ ಗಾಲಿಗಳೆಷ್ಟು?
ಜಗ್ಗುವ ಇಂಜೀನುಗಳೆಷ್ಟು ಬೇಕು?
ಪ್ರಯಾಣ ಕಷ್ಟವೆಂದು
ಇಳಿಯುವ ಮುನ್ನ ಹೃದಯಿಗಳಾಗಿ
ಬಿಟ್ಟಿಳಿಯುವ ಕಷ್ಟಗಳ ಬಗ್ಗೆ ಯೋಚಿಸಬೇಕು...


ರುದ್ರಪ್ಪ...

ಭಾನುವಾರ, ಡಿಸೆಂಬರ್ 11, 2011

ನಿನ್ನ ಎತ್ತರ...


ನಿನ್ನ ಎತ್ತರ...

ನೆಲದಾಳದಿ ಬೇರೂರಿ 
ನೀನತ್ತುವಾಗ ಅಲುಗಾಡದೆ
ಗಟ್ಟಿಯಾಗಿ ಕೈವೂರಿ 

ನಿನ್ನನೆತ್ತಿ ಹಿಡಿದಿದ್ದು 
ಹದ್ದು ರಣಹದ್ದುಗಳಿಗೆ ಕಂಡು 
ಕಿತ್ತೊಯ್ಯಲು ಅಲ್ಲ!

ನಿನ್ನ ನೋಡಬಯಸುವರೆಲ್ಲ 
ತಲೆಯೆತ್ತಿ ನೋಡಬೇಕೆಂದು
ಕಂಡು ತಲೆಬಾಗಿಸಲು ಅಲ್ಲ...

ರುದ್ರಪ್ಪ....

30 ನಿಮಿಷಗಳ ಸರ್ಕಸ್ಸು,


30  ನಿಮಿಷಗಳ ಸರ್ಕಸ್ಸು,

ಗೆದ್ದ ಸರದಾರನೊಬ್ಬ  
ಕೈಗಡಿಯಾರದ ಕೈಗೊಂಬೆ
ಯಾಗಿ ಚಿಂತೆ ಗಳಿಗೆಯಲಿ 
ಚಿಂತೆಗಳಿಗೆ ಉಣ್ಣುವ ಹಬ್ಬ ಆಗಿದ್ದ ...

ನೋವಾದಷ್ಟೂ ಒತ್ತಿ 
ಮೂರು ಮುಳ್ಳುಗಳ ಹಿಡಿದು
ತುಡಿತದ ಕುಣಿತಕೆ ಬಾರದ 
ನಿರ್ದೇಶಕಿಗೆ ಎದುರು ನೋಡುತಿದ್ದ... 

ದಪ್ಪ ಚರ್ಮದ ಒಳಗೆ 
ಮೆತ್ತನೆಯ ಜಾಗ ಹುಡುಕಿ  
ತಿವಿಯುವ ಚುಚ್ಚುವ ಆ ಮೂರು
ಮುಳ್ಳುಗಳ ಪದೆ ಪದೆ ನೋಡುತಿದ್ದ... 

ಹಿಡಿತ ಜಾರಿ ತಪ್ಪಿಸಿದ ನುಣ್ಣನೆಯ 
ಮುಳ್ಳುಗಳು ಆಳಕೆ ಚುಚ್ಚಿ 
ವಿಷಾದ ವಿಷವ ಬಿಟ್ಟು ವೇದನೆಗೂ 
ಅವಕಾಶ ಕೊಡದೆ ಓಡುವದ ನೋಡುತಿದ್ದ... 

ದೂರದೂರಿನ ಗುಬ್ಬಿಯಂತೆ 
ಎದೆಯೆಲ್ಲ ಆವರಿಸುತಿಹ ಕತ್ತಲಿಗೆ 
ಮಾತಾಡಿಸದೇ ಮರಳುವ ಬೆಳಕಿಗೆ 
ಕೆಟ್ಟ ಕಣ್ಬಿಟ್ಟು ಸಿಟ್ಟು ಮಾಡುತಿದ್ದ... 

ಸರಿ ಸಮಯಕೆ ಕೊಬ್ಬನುಂಡು   
ಹೊಂಚಿದ ಸೇಡಿಗೆ ಒಳಗೆಲ್ಲ ಓಡಾಡುವ  
ಅತಿಯಾಗಿ ಪಟ್ಟ ಆಸೆಗಳ
ಒಂದೊಂದೆ ಹಿಡಿದು ನ್ಯಾಯ ಕೇಳುತಿದ್ದ... 

ಕೈಗಡಿಯಾರದ ಸರದಾರ
ಸಮಯಕೆ ಕಟ್ಟದೆ ಮೂಗುದಾರ ಬರಿ 
ಕೈಗೆ ಕಟ್ಟಿ ನಿಲ್ಲಲು ಎಳೆಯುತ 
ಕೈ ಬಿಡದಿರಲು ಕಣ್ಸನ್ನೆಯಲಿ ಬೇಡುತಿದ್ದ... 

ಬಂದವರಲ್ಲಿ ಅವಳೇ 
ಬರಬಾರದಿತ್ತೆ ಹೋಗಲಿ 
ಮುಂದೆ ಬರುವವರಲ್ಲಿ ಅವಳೇ 
ಮುಂದಾಗಿ ಬರಬಾರದೇ ಎಂದೆಲ್ಲ ಬೇಡಿದ್ದ...

ಬಂದವರೆಲ್ಲ ತನ್ನವರೇನೋ ಎಂಬ
ಕುತೂಹಲ ನಿರಾಸೆಯ ಅವಳಿಗಳ 
ಸರದಿಯಾಗಿ ಪ್ರಸವಗೊಂಡು 
ಎಣಿಸದಷ್ಟು ಬಾರಿ ನೋವ ಚೀತ್ಕಾರ ಹಿಡಿದಿಟ್ಟಿದ್ದ...  

ಸಹನೆಯ ಕೊನೆಯ ಗಳಿಗೆ 
ಬಾರದಿದ್ದಾಗ ಕಟ್ಟೆಯೊದ್ದು   
ಫೋನಾಯಿಸಿ "ಎಲ್ಲಿದೀಯ?" ಎಂದಾಗ
ಅವಳಮ್ಮ "ಆಸ್ಪತ್ರೆಯಲಿ" ಅಂದಾಗ ಒಡೆದು ನೂರಾಗಿದ್ದ...

ನೋವಿನಂಗಡಿಯ ಮುಂದೆ ನಿಂತು 
ಕೊಟ್ಟ ಸಹನೆಯ ಬೆಲೆ 
ಹೆಚ್ಚಾಯಿತೋ! ಕಡಿಮೆಯಾಯಿತೋ ?
ಕೊಳ್ಳಲು ಬಂದು ಕಳೆದು ಕೊಳ್ಳುವಂತಾಯಿತಲ್ಲ ಎಂದು ಕೊರಗುತಿದ್ದ...

ರುದ್ರಪ್ಪ... ಮತ್ತೆ ಮರಳಿ ನೆನಪಾಗದಿರು...ಮತ್ತೆ ಮರಳಿ ನೆನಪಾಗದಿರು...

ನೆಪವೊಡ್ಡಿ ನೆನಪಾಗದಿರು
ನೀ ನೆನಪೇ ! 
ಪಿಳ್ಳೆ ಕಾರಣ ಹೇಳದಿರು 
ಕಣ್ಣ ಮುಂದೆ ಮತ್ತೆ ಕಾಣದಿರು ...

ನೆನಪೇ ನೆನಪಾಗದಿರು ಮತ್ತೆ
ಬಂದರೆ ಹಿಂಬಾಲಿಸಿ
ಬಿಡದೆ ಬೆನ್ನಟ್ಟಿ ದಾರಿ 
ನೆನಪಿರದ ಕಾಡಿಗೆ ಬಿಟ್ಟು ಬರುವೆ... 

ಒಹ್ ನೆನಪೇ ನೆನಪಾಗದಿರು ಮತ್ತೆ
ಕಲ್ಲು ಕಟ್ಟಿ ಮತ್ತೆಂದೂ
ಮೇಲೆದ್ದು ಮರಳುವ ದಾರಿಗೆ
ಬೆಳಕಿಲ್ಲದ ಬಾವಿಗೆ ನೂಕಿ ಬಿಡುವೆ

ನೆನಪೇ ನೆನಪಾಗದಿರು ಮತ್ತೆ ಮತ್ತೆ
ಕೈಯಲಿರುವ ನೆನಪ ಕಸಿದು 
ಹರಿದು ಸುಟ್ಟು ಬೂದಿ 
ಹೊರ ಹಾರದಂತೆ ಹೂತಿಡುವೆ   

ನಿನ್ನನೇನು ಮಾಡಿದೆನೆಂಬ ಸತ್ಯದ 
ಉಸಿರ ಹಿಸುಕಿ ಕಣ್ಣು ಮುಚ್ಚಿ ಹೂತು 
ಮರಳಿ ನೆನಪಾಗದಂತೆ ಮರೆತುಬಿಡುವೆ
ಒಹ್ ನೆನಪೇ! ಮರಳಿ ನೆನಪಾಗದಿರು ಮತ್ತೆ ಅರಳಿ...

ರುದ್ರಪ್ಪ...

ಶನಿವಾರ, ಡಿಸೆಂಬರ್ 10, 2011

ದೂರ ಕಾಣದಂತೆ...ದೂರ ಕಾಣದಂತೆ...


ಕಾಣುವದ ನೋಡದಂತೆ
ಎಲ್ಲೋ ನೋಡಬಯಸುವ
ಕಂಗಳು ಶೂನ್ಯ ಸೇರಿವೆ
ಇನ್ನೇನು ನೋಡದಂತೆ...


ಪದೇ ಪದೇ ಜಾರುವ ಹನಿಗಳ 
ಒರೆಸುವ ಮುಂಗೈ ಕೂಡ
ದೂರ ಅಲುಗದೆ ನಿಂತಿದೆ
ಇನ್ನೆಂದು ಮೇಲೇಳದಂತೆ...


ಆರ್ದ್ರ ಹೃದಯದ ಒಳಗೆಲ್ಲ
ಬಿಸಿಯಿಲ್ಲದೆ ಹೆಪ್ಪುಗಟ್ಟಿದೆ
ಮಾತಾಡಿಸುವ ಮೌನ ಹರಿಯದೆ
ನಿನ್ನಂತೆ...!!!


ಬದುಕುವಾಸೆ ಸರಾಗವಾಗಿ
ಬಡಿತವಿಲ್ಲದೆ ಹಿಡಿತವಿಲ್ಲದೆ
ಎಲ್ಲ ಕೊಡವಿ ಕುಸಿಯುತಿದೆ    
ಇನ್ನೇಳದಂತೆ... 


ಈ ಜೀವ ನಿನ್ನ ಎದುರಿಗೆ
ನಿಲುಕದ ಉಸಿರಿಗೂ ನಿಲುಕದೆ
ಕೊಸರಾಡಿ ಕೊನೆಯುಸಿರೆಳೆದಿದೆ
ಇನ್ನಿಲ್ಲದಂತೆ...


ಅತ್ತ ಇತ್ತ ಹಾಯದ ಉಸಿರನು
ಎರಡು ಬೆರಳಿಡಿದು ಕೆಣಕದಿರು
ಸುಳಿವ ನಿನ್ನ ಹತ್ತಿರಕೆ
ಉಸಿರು ಮತ್ತೆ ಮರಳದಂತೆ...


ಕಾಣದಂತೆ ಮಾಯವಾಗು
ಹೆಣವ ದೂರ ದೂಡಿ
ಅಪ್ಪಿ ತಪ್ಪಿ ನಿನ್ನ ದೂರ ನೋಟಕೆ
ಈ ಜೀವ ಇನ್ನೆಂದು ಏಳದಂತೆ...


ರುದ್ರಪ್ಪ... 

ಮಂಗಳವಾರ, ಡಿಸೆಂಬರ್ 6, 2011

ಓಡತಿತ್ತ ಹಾರತಿತ್ತ,

ಓಡತಿತ್ತ ಹಾರತಿತ್ತ,
                          
ಇಲ್ಲಿ ಪ್ರ-ಸಾರ ಬರಿ ಕಪ್ಪು...

ಕರಿ ಕವರ್ ಕರೆ ಹೊಳಪಿನ
ಹಾರ್ಗುದುರಿ ಹಂಗ ಗಾಳಿಗೊಮ್ಮೆ
ರೆಕ್ಕಿ ಬಡದು ಒಂದ ಹೆಜ್ಜಿಗೆ
ಮ್ಯಾಲ ಏರಿ ಹಾರಿ ಓಡತಿತ್ತ ಹಾರತಿತ್ತ...

ಏನ್ ಕುಡದ್ರು ಏನ್ ತಿಂದ್ರು
ಅಂತ ಯಾರಿಗೂ ಗೊತ್ತಾಗದಂಗ
ಕೈಬೆರಳಾಗ ಜೋತು ಬಿದ್ದು
ಒಳಗಿಂದು ಹೊರ ಬೀಳದಂಗ ಗುಟ್ಟ ಕಾಪಾಡಿತ್ತ

ಒಳಗಿನ ಮರ್ಮ ಯಾವ
ಬಣ್ಣ ಎಷ್ಟೈತಣ್ಣ ಅಂತ ತೋರದ
ಹೊರಗೊಂದ ಬಣ್ಣ ಬೀರಿ
ಕಪ್ಪ ಬೆಕ್ಕಿನಾಂಗ ಸಂಚು ಮಾಡಿ ಗುಟ್ಟ ನುಂಗಿತ್ತ

ಮೂಕ ಜೀವಿಯ ಹೆಣಾ ಹೊತ್ತು
ಸುಟ್ಟು ಹೊಟ್ಟ್ಯಾಗ ಹಾಕಿ
ಕೈ ಬಳ್ಳಾಗ ಜೀಕಾ ಹೊಡದು
ಕಸದ ಸಮುದ್ರದಾಗ ಅಸ್ತಿ ಬಿಟ್ಟಂಗ ತೇಲಿಬಿತ್ತ...

ಕಪ್ಪು ಬಣ್ಣದ ದೆವ್ವ ಹೊತ್ಕೊಂಡ
ಹೆಂಡಾ ಹೊಟ್ಟ್ಯಾಗ ಇಟ್ಟು
ಹೆಂಡತಿ ಮಕ್ಕಳ ಜೀವನ ಬೆಂಕ್ಯಾಗಿಟ್ಟು
ಕಸದಾಗ ಜಾರಿ ಹಾರಿ ಮಜಾ ನೋಡುತಿತ್ತ

ಝಳ ಝಳ ಹರಿಯೋ ನೀರಿಗೆ ಬಿದ್ದು
ಚಳ ಚಳ ಸಪ್ಪಳ ಮಾಡ್ಕೊತ
ಹೊಟ್ಟಿ ಉಬ್ಬಿ ಉಸಿರುಗಟ್ಟಿದ್ರು
ಸಾಯದ ತೇಲಿ ಹೆಣಾ ಆಗದಂಗ ಈಜತಿತ್ತ...

ಹುಚ್ಚ ಹಿಡದ ಕರೆ ಮುಶ್ಯಾನಂಗ
ಗಿಡ ಮನಿಮ್ಯಾಲೆ ಜೋತಾಡಿ
ಮತ್ತ ಗಾಳಿ ಜೊತಿ ಹಾರಾಡಿ ಕಸದ ಸುತ್ತ
ಕಪ್ಪ ಕಾಗಿಹಂಗ ಗರ ಗರ ಸುತ್ತತಿತ್ತ...

ಇದಕ್ಕ ಸಾವಿಲ್ಲ ಅನ್ನೋದು ಸುಳ್ಳಲ್ಲ
ಕಣ್ಣ ಮುಂದ ಹಾರಾಡೋ ಸತ್ಯಾನ
ಕಣ್ಣಿಗೆ ಕರಿ ಪಟ್ಟಿ ಕಟ್ಕೊಂಡು ಕಪ್ಪು ಪರಿಸರದಾಗ
ಬಕಪಕ್ಷಿ ಹಂಗ ಹಸಿರು ಬರೆ ಕನಸ್ನ್ಯಾಗ ಕಂಡಿತ್ತ...

ರುದ್ರಪ್ಪ...