ಬುಧವಾರ, ಸೆಪ್ಟೆಂಬರ್ 25, 2013

ಎರಡು ಕವಿತೆಗಳ ನಡುವೆ

ಎರಡು ಕವಿತೆಗಳ ನಡುವೆ 

ಗರ್ಭ ಕಟ್ಟುತಿಲ್ಲ!
ಮನಸಿಗಿಂದು ಮಧ್ಯ
ವಿರಾಮದ 
ವಿಲಾಸಿ ಹಣೆಪಟ್ಟಿ 
ಕಂಡವರು  
ಹಳಿದವರು 
ಹೇಳಿದರು ಭಾವ 
ಬಂಜೆಯಾದಳೆಂದು
ಗೊಡ್ಡು ಲೇಖನಿಯೆಂದು 

ಅವರಿಗೆಲ್ಲ ಗೊತ್ತಿಲ್ಲ 
ಅನು ದಿನವು 
ನಾನೊಂದು ಕವಿತೆ 
ಅವನೊಂದು ಕವಿತೆ 
ಇವನೊಂದು ಕವಿತೆ 
ಅವರವರ ಇತಿಹಾಸಕ್ಕೆ !!

ರುದ್ರಪ್ಪ.

ಶುಕ್ರವಾರ, ಆಗಸ್ಟ್ 30, 2013

ಮತ್ತೆ ಮನ್ವಂತರ...

ಮತ್ತೆ ಮನ್ವಂತರ 

ಭಾವ, ತರ್ಕಗಳ 

ಎದುರು ಬದುರಿನ ವಕಾಲತ್ತು, 
ಹೃದಯ ಮಿದುಳಿಗೀಗ 
ವಿಚ್ಛೇದನ, 
ಕೊನೆಗೂ ಬಂತು 
ಕನಸುಗಳಿಗೆ ಸ್ವೇಚ್ಛೆಯ ಸ್ವಾತಂತ್ರ್ಯ
ಮಧ್ಯರಾತ್ರಿಗೆ,

ಒಂದೇ ರಾತ್ರಿ  
ಬಿಟ್ಟಿರದ ದಂಪತಿಗಳು  
ಒಂದೇ ಕಂಬಳಿಯಡಿಯಲಿ 
ನೋಡಲು ಬೆಳಿಗ್ಗೆಗೆ 

ಮತ್ತೆ ಮೋಹ ತುಡಿವ 

ಮುಂಜಾವಿನಲಿ 
ಪ್ರೀತಿ ಕಣ್ಬಿಡುವ 
ಸಲ್ಲಾಪದಲಿ 

ತಂ ತಮ್ಮವೆಂಬಂತೆ 

ಬೇರ್ಪಡಿಸಿ ಕೂಡಿಟ್ಟ 
ಅದೆಷ್ಟೋ ಆಸೆಗಳೇ ಸಂಪದವೀಗ, 
ಕುರಿತು ಎದುರು ಕೂತು  
ಅದೇ ಪ್ರೇಮಿಗಳ ಸಂವಾದವೀಗ 

ಬಿಟ್ಟಿರದ ಒಲವ ಬೆಳಗಿನಲಿ 

ಮೂಡುತಿದೆ ಸಮನ್ವಯ 
ನನ್ನೊಳವಿಗೆ 
ನನ್ನೊಳಿತಿಗೆ 
ಕಾಣುತಿದೆ   
ಕಾಡುತಿದೆ 
ಮತ್ತೆ ಮನ್ವಂತರ.. ಮತ್ತೆ ಮನ್ವಂತರ... 

ರುದ್ರಪ್ಪ...  

ಶುಕ್ರವಾರ, ಆಗಸ್ಟ್ 23, 2013

ಮಿನುಗು ದೀಪ

ಮಿನುಗು ದೀಪ 

ಸ್ವಚ್ಚ ನೆನಪಿನ ಆಗಸದಲಿ 
ಅದೆಷ್ಟೋ 
ಮಿನುಗು ನಕ್ಷತ್ರಗಳು 
ಮತ್ತೆಲ್ಲೋ ಆ  
ಬಯಕೆಯ ಚಂದ್ರ 
ದೂರದಲ್ಲಿ ಎಟುಕದಂತೆ  
ಮಿಂಚುತ್ತವೆ, ಹೊಳೆಯುತ್ತವೆ 
ಕತ್ತಲಾವರಿಸದ ಕೂಡಲೇ
ಕಣ್ತುಂಬುತ್ತವೆ... 

ಈಗೀಗ ಅದೇ ಕತ್ತಲಿಗೆ 
ನಾ ಹಚ್ಚುವ 
ಅವಳೆನ್ನಿಸುವ  
ಬೊಗಸೆಯಗಲದ 
ಮಿನುಗು ದೀಪ 
ತಾ ಚೆಲ್ಲುವ ಬೆಳಕಿನಲ್ಲಿ 
ಬೆಳಗುವಳು ಎನ್ನ 
ನನ್ನರಿತು ತಾನುರಿದು, 
ತನ್ನೆಲ್ಲ ಬಿಸಿಯ ಎನಗಾಗಿ 
ಧಾರೆ ಎರೆಯುವ  
ತಪಸ್ವಿಯಂತೆ ನಿರಂತರ... 

ಕಷ್ಟದ ಕತ್ತಲಲಿ 
ನಾ ದೀಪ ಹಚ್ಚದಿದ್ದರೂ  
ನಾ ಮರೆತರೂ 
ತಾ ಮಿಂಚಿ 
ತನ್ನಿರುವ ತಾ 
ತೋರಿ ಮಿಂಚುವಳು 
ಮಿಂಚು ಹುಳುವಾಗಿ
ಕೈಗೆಟುಕುವ ಹತ್ತಿರವಾಗಿ 
ಕತ್ತಲಿಗೆ ಮತ್ತದೇ  
ಸರಳ ಸ್ಪಷ್ಟ ಉತ್ತರವಾಗಿ...    

ರುದ್ರಪ್ಪ... 

ಗುರುವಾರ, ಆಗಸ್ಟ್ 22, 2013

ಸ್ಪೂರ್ತಿ...

ನೆನ್ನೆಯು ಈ ದಿನಕೆ ಸ್ಪೂರ್ತಿಯಾಗಿರಲಿ, 
ನಾಳೆಗೆ ಈ ದಿನವು ಸ್ಪೂರ್ತಿಯಾಗಿರಲಿ...
ದಿನದಿಂದ ಮತ್ತೊಂದು ದಿನದ ಸ್ಪೂರ್ತಿದೀಪ ಬೆಳಗುತಿರಲಿ, 
ಚೈತನ್ಯದ ಬೆಳಕು ದಾರಿಯುದ್ದಕ್ಕೂ ನಿರಂತರವಾಗಿರಲಿ...

ರುದ್ರಪ್ಪ...

ನೋಟದ ಹಾರಾಟ,

ಕಣ್ರೆಕ್ಕೆಗಳ ಬಿಚ್ಚಿ 
ನೋಟದ ಹಾರಾಟ,
ಬೆಳಗಿನ ಬೆಳಕಿಗೆ 
ಪುಕ್ಕಗಳ ಬಡಿತ, 
ಕಣ್ಬಿಚ್ಚಿ ಎತ್ತರೆತ್ತರಕೆ 
ಹಾರಲಿ ನಿನ್ನ ನೋಟ,
ಆಗೊಮ್ಮೆ ಈಗೊಮ್ಮೆ
ಆಳಕ್ಕೆ ಧುಮಕಲಿ ಒಳನೋಟ,
ಸುಖಕರವಾಗಿರಲಿ ನಿನ್ನ
ಈ ದಿನದ ಹಾರಾಟ,
ಗೆಲುವಾಗಿರಲಿ ನಿನ್ನ
ಕಣ್ರೆಕ್ಕೆಗಳ ಪ್ರತಿ ಬಡಿತ ...

ರುದ್ರಪ್ಪ..

ಮುದ ಕನಸುಗಳು...

ಮುದ ಕನಸುಗಳು...

ಕಣ್ಮುಚ್ಚಿ ಕಣ್ತೆರೆಯುವ ಕನಸುಗಳು ,
ಹೊಸ ಬಣ್ಣದ ಉಡುಗೆ ಉಟ್ಟು
ತುಂಬು ಜೇಬಲ್ಲಿ ಆಸೆ ಹೊತ್ತು
ತನಗೆಂದೇ ಖುಷಿಯ ಹಬ್ಬದ ಖರೀದಿಗಳು... 

ಮೈಮರೆತೇ ಮಾಡುವ
ಮೂರೇ ಕಾಸಿಗೆ ಮೂರು ಲೋಕವ
ಕೊಂಡು ಮಾರುವ ವ್ಯವಹಾರ
ಮುಗಿಸಿಯೇ ಎಚ್ಚೆತ್ತುಕೊಳ್ಳುವ ...

ನಿದಿರೆಯು ಕೈ-ಕೊಡವುದಕ್ಕೆ ಮೊದಲು
ಕನಸೊಂದ ಹಾಡಿ ಮಲಗಿಸಲು
ಸುಪ್ರಭಾತವ ಸುಖನಿದ್ದೆಯಲಿ
ಕೇಳೋಣ ರೇಡಿಯೋ ಹಾಡಲು ...

ದಣಿದ ಮನವು ನಿದ್ರಿಸಲಿ
ಇಂದೊಮ್ಮೆ ಮತ್ತೊಮ್ಮೆ
ಕನಸೊಂದು ಹುಟ್ಟಲು ಅರಳಿ ನಿಲ್ಲಲು
ವಿಹರಿಸಲು ಮೈಮರೆತು ಅಲ್ಲೊಮ್ಮೆ ಇಲ್ಲೊಮ್ಮೆ ...

ರುದ್ರಪ್ಪ...

ನೋವು...

ನೋವು...

ಬೇನೆಯ ಅಡ್ಡ ಮಳೆ-ಗಾಳಿಯಲ್ಲಿ 
ಅಡ್ಡಲಾಗಿ 
ಆಟಪತ್ರ ಹಿಡಿದು ನಡೆವ ಬದುಕು 
ಮಣ್ಣಿನ ಮನೆ ಸೇರಿದಾಗ 
ಉಟ್ಟ ಬಟ್ಟೆಯೆಲ್ಲ ನೆನೆದಿತ್ತು...

ಒಮ್ಮೆ ಗಾಳಿಗೆ ಒಮ್ಮೆ ಮಳೆಗೆ 
ಮೈಯೊಡ್ಡಿ ನಿಂತ 
ಆಟಪತ್ರ ಕೂಡ
ಮುದುಡಿ ಮೂಲೆ ಸೇರಿ
ಹನಿ ಹನಿಯಾಗಿ ಅಳುತ್ತಿತ್ತು...

ರುದ್ರಪ್ಪ...