ಗುರುವಾರ, ಫೆಬ್ರವರಿ 23, 2012

ಮಲಗಿದ ಕಾವಲುಗಾರ...ಕವಿದ ಮಂಜೆಲ್ಲ ಬೆಳಕಿನಲಿ ಆದಂತೆ ಮಾಯಾ
ಕತ್ತಲು ಕೂಡ ಬೆಳಕಿನಲ್ಲಿ ಕರಗುವ ಸಮಯ
ಕಣ್ಬಿಟ್ಟರೆ ಕನಸೊಂದು ಮುಗಿದು ಬಿಡುವ ಭಯ
ನಿದ್ದೆಯ ಮುದ್ದೆ ಮಾಡಿ ಹಿಡಿದಿಟ್ಟುಕೊಳ್ಳುವ ಜೀವ
ದಿಂಬೊಂದ ತಬ್ಬಿ ಕನಸನ್ನು ನನ್ನದೆಂದು
ಬಿಗಿಯಾಗಿ ಬಿಡದಂತೆ ಅಪ್ಪಿಕೊಳ್ಳುವ ...

ಎಲ್ಲ ಮೀರಿ ಮಲಗಿಹೆ ಕನಸಿಗೆ ಕಾವಲಿತ್ತು
ಅರಳಿ ನಿಂತ ಚಹದ ಘಮ ಘಮ ಮೂಗಿನಲಿ,
ನುಸುಳುವ ಸುಬ್ಬಲಕ್ಷ್ಮಿಯಾ ಹಾಡು ಕಿವಿಯ ಸಂದಿಯಲಿ
"ಏಳೋ ಏಳೋ" ಎನ್ನುವ ಅಪ್ಪನ ಅಬ್ಬರವ
"ಏಳಪ್ಪ ಏಳಪ್ಪ" ಎನ್ನುವ ಅಮ್ಮನ ವಾತ್ಸಲ್ಯವ
ಏನೂ ಬೇಡವೆನಿಸಿ ಮತ್ತೆ ಕನಸಿಗೆ ಮಲಗಿ ಕಾವಲಿರುವ...

ರುದ್ರಪ್ಪ...

ಗೋಡೆ ಗಡಿಯಾರದ ಸಂಸಾರ ...

ಈ ಕವನ Dr.D.T.Krishna Murthy. ಅವರ "ಗಡಿಯಾರ !!" ಎಂಬ ಕವನದಿಂದ ಪ್ರೇರೇಪಿತನಾಗಿ ಬರೆದದ್ದು, ಸಾಮ್ಯಗಳ ಅದೇ ಕವನದಿಂದ ಹಿಡಿದು ತಂದಿದ್ದು...ಅವರ ಪರವಾನಿಗೆಯಿಲ್ಲದೆ ಹಂಚಿಕೊಳ್ಳುತ್ತಿದ್ದೇನೆ... ಮತ್ತು ಕ್ಷಮೆ ಕೋರುತ್ತಿದ್ದೇನೆ ...


http://www.dtkmurthy.blogspot.in/2011/10/blog-post_17.htmlಗೋಡೆ ಗಡಿಯಾರದ ಸಂಸಾರ ...


ನೀನೊಂದು ನಿಮಿಷದ ಮುಳ್ಳು
ನಾನೊಬ್ಬ ಘಂಟೆಯ ಮುಳ್ಳು
ನೀ ಅರವತ್ತು ಬಾರಿ ಕರೆಯಲು
ನಾ ಒಂದು ಬಾರಿ ಓ ಎನ್ನಲು
ಇದು ತಾತ್ಸಾರವಲ್ಲ ಕಣೆ
ನಿನ್ನ ದನಿ ಪದೆ ಪದೇ ಕೇಳುವ ಚಪಲ

ನಿಮಿಷಕ್ಕೊಂದು ಹರಿದಾಡುವ ನಿನ್ನ ಆಸೆ
ಮಾಡಿದೆ ಕನ್ನ ಹಾಕುವ ಸಂಚನ್ನ
ನೋಡುತ ನನ್ನ ಜೇಬನ್ನ
ಸುತ್ತಿಗೊಂದು ಬಾರಿ ಹತ್ತಿರ ಸುಳಿವ ನೀನು
ನಿಮಿಷಕ್ಕೊಂದು ಬಾರಿ ತಿವಿದು
ಹೇಳುವೆ "ಎಷ್ಟು ನಿಧಾನ ನೀವು"!!

ಟಿಕ್ ಟಿಕ್ ಎನ್ನುವ ಹೃದಯದಲ್ಲಿ
ಹುಟ್ಟುವ ಸದ್ದಿಲ್ಲದ ಆಸೆಗಳಲಿ
ಕೇಳಿದ್ದೆಲ್ಲ ಕೊಡಿಸದಿದ್ದರೆ
ಪ್ರೀತಿಯ ಹಠಾತ್ ಮುಷ್ಕರ !!
ಜೋಡು ಮುಳ್ಳಿನ ಬ್ಯಾಟರಿ ಮುಗಿದ ಥರ

ಸಂಧಿಸುವ ಸಮಯ ಮೀರುತಿದೆ
ಮುನಿಸನ್ನು ಬಿಟ್ಟು ಬರಬಾರದೆ
ಹೇಳು ನೀನು, ಬೇಡವೇನು ?
ನಿನ್ನ ನನ್ನ ಸದಾ ಸುತ್ತುವ
ಸೆಕಂಡಿನ ಮುಳ್ಳುಗಳು ನಿನಗೆ !!

ರುದ್ರಪ್ಪ...

ಬೆಳಕು...

ಬೆಳಕು...

________________________________

ಅತ್ತೊಂದು ಕನಸು ಇತ್ತೊಂದು ಕನಸು
ಕತ್ತಲನ್ನು ಕಡೆದು ಬೆಳಕಿನ ಬೆಣ್ಣೆಯೊಂದು ಮೂಡಿದೆ,
ನೋಡು ಬಾ ಬೆಳಕೆಲ್ಲ ಹರಡಿದೆ...
ಹೊಸದಿನಕೆ ಹೊಸಬೆಳಕಿನ ಹೊಂದಾಣಿಕೆ,
ನಿಲ್ಲಿಸು ಬಾ ನೀಡಿ ನಿನ್ನಾಸೆಯ
ನಿಲುವಿನ ಆಣಿಕೆ, ಈ ಅರಳಿ ನಿಲ್ಲುವ ದಿನಕೆ...
________________________________


ರುದ್ರಪ್ಪ...
 

ಆಶಾವಾದ...

ಆಶಾವಾದ...______________________

ಮರಳಿನಂತೆ ಮರಳು
ಮಾಡಿ ಹೆಜ್ಜೆ ಜಾರಿಸುವ
ಹತಾಶೆಯ ಮೆಟ್ಟಿ
ಮತ್ತೊಮ್ಮೆ ಮೇಲೇಳಲು
ಹಂಬಲದ ಕೋಲನೂರಿ ನಿಲ್ಲುವ
ಆಸೆಯೆಲ್ಲಾ ಬಿಗಿದು ಕಟ್ಟುವ
ಕುಸಿಯುವ ದಾರಿಯ ಕುಸಿಯದಂತೆ
ಚುಚ್ಚಿ ಚುಚ್ಚಿ ಬಡಿದೆಬ್ಬಿಸುವ
ದಾಹ ನೀಗಿಸುವ ಆ ಗುರಿಯ
ಧೀರ ದಾಪುಗಾಲಿನಲಿ ಸಾಧಿಸುವ...
_______________________


ರುದ್ರಪ್ಪ...

ದಿನಚರಿ...

ಅಭಿನಂದನೆ...

ಅಭಿನಂದನೆ...

__________________________
ಇಂದು ನಾಳೆಯಾ ನಡುವೆ,
ನನ್ನ ನಂಬಿಕೆಗಳೇ ಮೋಸ ಮಾಡಿವೆ...
ಕಣ್ಣೀರಿಗೂ ಮೋಸ ಮಾಡಿ,
ಮೋಸ ನೋಡಿ ಇಂದು ನಕ್ಕು ಬಿಟ್ಟೆ ...

ಇಲ್ಲದಿರುವಾಗಲೂ ನಂಬಿಕೆಗಳು
ಜೀವಂತವಾಗಿ ಉಳಿಯಲು
ನನ್ನ ಉಯಿಲಿನಲ್ಲಿ ಅಭಿನಂದನೆಗಳ
ನಂಬಿಕೆಗಳ ಹೆಸರಿಗೆ ಬರೆದು ಬಿಟ್ಟೆ...
_________________________


ರುದ್ರಪ್ಪ...

ಲಗೋರಿ ಕಲ್ಲುಗಳು...ಒಂದರ ಮೇಲೊಂದು
ಒಟ್ಟಿದ ಲಗೋರಿ ಕನಸುಗಳು
ಕಲ್ಲು ಗೋರಿಯ ಬಿಟ್ಟು
ಗುರಿಯಿಲ್ಲದೆ ಅಲುಗದ
ದೊಡ್ಡ ಕನಸಿನ ಮೇಲೆ
ನಿಂತ ಸಣ್ಣ ಕನಸುಗಳ
ಗುರಿಯಿಟ್ಟು ಸಾಧಿಸುವ
ಒಟ್ಟಲು ಕೈಗೂಡಿ
ನನ್ನವರ ಒಟ್ಟುಗೂಡಿ
ಸ್ಪರ್ಧೆಗೆ ಬೆನ್ನು ಕೊಡದೆ
ದೃಷ್ಟಿ ನೆಟ್ಟು ಮುಖ ಕೊಟ್ಟು
ಬೀಳುವ ಕೊಂಕಿನೇಟು ತಪ್ಪಿಸುವ

ಚಿಕ್ಕ ಚಿಕ್ಕ ಲಗೋರಿಗೆ
ತೀಕ್ಷ್ಣ ಗುರಿ ಇಡುವ
ಕಡಿಮೆ ಕಷ್ಟದಿ ಮರಳಿ ಒಟ್ಟುವ
ಎತ್ತರದ ಲಗೋರಿಗೆ ನೆನಪಿಡಬೇಕು
ಗುರಿ ಅಲ್ಪ ತಡವಿದರೂ ಸಾಕು
ಮರಳಿ ಕಟ್ಟುವ ಸಾಕಷ್ಟು ಶ್ರಮ ಬೇಕು...

ತಪ್ಪಿದ ಗುರಿಗಳ ತಪ್ಪದೆ
ಎನಿಸೆನಿಸಿ ಹಿಡಿಯುವ
ಪ್ರತಿಸ್ಪರ್ಧಿಯ ಪೈಪೋಟಿಯ
ಎದುರಿಸಿ ಸೋಲಿಸಿ
ದುಂಬಾಲು ಬೀಳುವ
ಬೆನ್ನ ಹಿಂದಿನ ಮಾತನು ಕಡೆಗಣಿಸಿ
ನನ್ನವರ ಕೈಗೂಡಿಸಿ
ಒಟ್ಟಿಗೆ ಕಂಡು ಮತ್ತೆ ಒಟ್ಟುವ
ಚದುರಿದ ಕನಸುಗಳ ಸೇರಿಸುವ
ಜಯಿಸಲು ಸೋಲುಗಳ
ಮತ್ತೊಮ್ಮೆ ಕಟ್ಟುವ
ಸ್ಪರ್ಧಿಗಳ ಮೇಲೊಮ್ಮೆ
ಹೊಸ ಕನಸುಗಳ ಲಗೋರಿ !!

ರುದ್ರಪ್ಪ...

ಬಿಸಿ ಬಿಸಿ...
ಬಿಸಿ ಬಿಸಿ...
_____________________________

ಭಾವ ಬಿಸಿಲಿನ ಹತ್ತಿರಕೆ ಕರಗಿ
ಓ ಮಂಜಿನ ಹನಿಯೇ ನಾಚಿ ನೀರಾದರೂನು
ಮರುಗದಿರು ಬೊಗಸೆಯಲಿ ಹಿಡಿದೆತ್ತುವೆ ನಾನು,
ನನ್ನ ಕೈ ಬಿಟ್ಟು ಹರಿಯದಂತೆ ನೀನು...

ಬಯಸಿದ ಹತ್ತಿರವ ಕಂಡು
ನಾಚಿಕೆಯ ಝರಿಯಲ್ಲಿ ನೀನು
ಮುಖ ಮುಚ್ಚಿ ಮುಳುಗಿದರೂನು,
ಕೈ ಬಿಡಿಸಿ ಜಾರದಂತೆ ಹಿಡಿದೆತ್ತುವೆ ನಾನು...
______________________________

ರುದ್ರಪ್ಪ...

ಶುಕ್ರವಾರ, ಜನವರಿ 6, 2012

ಕಳೆದ ಭಾವಚಿತ್ರ ಪುಸ್ತಕ!...


ಕಳೆದದ್ದು ಸಿಕ್ಕಾಗ
ನನ್ನದೆನಿಸಿದ್ದು ಕಣ್ಮುಂದೆ ಕಂಡಾಗ
ಸಂತಸದ ಸಮುದ್ರಕೆ ಮನಸು
ಧುಮುಕಿದೆ ಕೈ ಮುಂದೆ ಮಾಡಿ, ಆಳ ನೋಡದೆ !

ಹಳೆಯ ನೆನಪುಗಳ ಕಣ್ಣು ಮುಚ್ಚಾಲೆ
ಹಸಿರು ಬಟ್ಟೆಯ ಸೇರಿ
ಒಂದೊಂದೇ ಪಾತ್ರಗಳ
ಹುಡುಕಿ ಹೊರತೆಗೆದಿವೆ ಬೆರಳು ತೋರಿ...

ಅದು ಬರಲಿ ಇದು ಬರಲಿ ಎಂದ
ನೆನಪಿನಿರುವೆಗಳು ಸಿಹಿ ಹೊತ್ತಂತೆ
ಹಿಗ್ಗಿ ಹಿಂಡಾಗಿ ಬರುತಿವೆ ಕಂಡ
ನೆನಪುಗಳು ಒಂದರ ಹಿಂದೊಂದರಂತೆ...

ಹುಚ್ಚು ಹುಚ್ಚಾಗಿ ಅಚ್ಚಾಗಿರುವ
ಹುರುಪಿನ ಹುಡುಗಾಟ ಕಣ್ಣೆದರು ಕಟ್ಟಿ
ಅದೇ ಹುಚ್ಚಿಗೆ ಮತ್ತೆ ಕೈ ಬೀಸಿ
ಕೆಣಕಿವೆ ಕಳೆದು ಹೋದ ನನ್ನ ಪದೇ ಪದೇ ಮುಟ್ಟಿ...

ಜೊತೆಯಿದ್ದು ಕಳೆದು ಕೂಡಿಸಿ
ಹಿಡಿದಿಟ್ಟ ಖುಷಿ ಕೊಟ್ಟ ಸಂಗತಿಗಳ
ಮತ್ತೆ ಮೆಲುಕಿತ್ತು ಈ ಮನ ತಿರುವುತ
ಕಳೆದು ಸಿಕ್ಕ ಹಳೆಯ ಭಾವಚಿತ್ರಗಳ...

ಚಿತ್ರಗಳಲಿ ನೀನಲ್ಲಿ ನಾನಿಲ್ಲಿ ಎಂದು ನಿಂತ
ಜಾಗಗಳು ಇನ್ನು ಅಲ್ಲೇ ಇವೆ
ಆ ಜಾಗದಲ್ಲಿ ಅಂದುಕೊಂಡ ಹಾಗೆ ಇಂದು
ನಾನಿಲ್ಲ! ಹುಡುಕಿದರೂ ನೀನಿಲ್ಲ !...

ರುದ್ರಪ್ಪ...