ಶುಕ್ರವಾರ, ಆಗಸ್ಟ್ 30, 2013

ಮತ್ತೆ ಮನ್ವಂತರ...

ಮತ್ತೆ ಮನ್ವಂತರ 

ಭಾವ, ತರ್ಕಗಳ 

ಎದುರು ಬದುರಿನ ವಕಾಲತ್ತು, 
ಹೃದಯ ಮಿದುಳಿಗೀಗ 
ವಿಚ್ಛೇದನ, 
ಕೊನೆಗೂ ಬಂತು 
ಕನಸುಗಳಿಗೆ ಸ್ವೇಚ್ಛೆಯ ಸ್ವಾತಂತ್ರ್ಯ
ಮಧ್ಯರಾತ್ರಿಗೆ,

ಒಂದೇ ರಾತ್ರಿ  
ಬಿಟ್ಟಿರದ ದಂಪತಿಗಳು  
ಒಂದೇ ಕಂಬಳಿಯಡಿಯಲಿ 
ನೋಡಲು ಬೆಳಿಗ್ಗೆಗೆ 

ಮತ್ತೆ ಮೋಹ ತುಡಿವ 

ಮುಂಜಾವಿನಲಿ 
ಪ್ರೀತಿ ಕಣ್ಬಿಡುವ 
ಸಲ್ಲಾಪದಲಿ 

ತಂ ತಮ್ಮವೆಂಬಂತೆ 

ಬೇರ್ಪಡಿಸಿ ಕೂಡಿಟ್ಟ 
ಅದೆಷ್ಟೋ ಆಸೆಗಳೇ ಸಂಪದವೀಗ, 
ಕುರಿತು ಎದುರು ಕೂತು  
ಅದೇ ಪ್ರೇಮಿಗಳ ಸಂವಾದವೀಗ 

ಬಿಟ್ಟಿರದ ಒಲವ ಬೆಳಗಿನಲಿ 

ಮೂಡುತಿದೆ ಸಮನ್ವಯ 
ನನ್ನೊಳವಿಗೆ 
ನನ್ನೊಳಿತಿಗೆ 
ಕಾಣುತಿದೆ   
ಕಾಡುತಿದೆ 
ಮತ್ತೆ ಮನ್ವಂತರ.. ಮತ್ತೆ ಮನ್ವಂತರ... 

ರುದ್ರಪ್ಪ...  

ಶುಕ್ರವಾರ, ಆಗಸ್ಟ್ 23, 2013

ಮಿನುಗು ದೀಪ

ಮಿನುಗು ದೀಪ 

ಸ್ವಚ್ಚ ನೆನಪಿನ ಆಗಸದಲಿ 
ಅದೆಷ್ಟೋ 
ಮಿನುಗು ನಕ್ಷತ್ರಗಳು 
ಮತ್ತೆಲ್ಲೋ ಆ  
ಬಯಕೆಯ ಚಂದ್ರ 
ದೂರದಲ್ಲಿ ಎಟುಕದಂತೆ  
ಮಿಂಚುತ್ತವೆ, ಹೊಳೆಯುತ್ತವೆ 
ಕತ್ತಲಾವರಿಸದ ಕೂಡಲೇ
ಕಣ್ತುಂಬುತ್ತವೆ... 

ಈಗೀಗ ಅದೇ ಕತ್ತಲಿಗೆ 
ನಾ ಹಚ್ಚುವ 
ಅವಳೆನ್ನಿಸುವ  
ಬೊಗಸೆಯಗಲದ 
ಮಿನುಗು ದೀಪ 
ತಾ ಚೆಲ್ಲುವ ಬೆಳಕಿನಲ್ಲಿ 
ಬೆಳಗುವಳು ಎನ್ನ 
ನನ್ನರಿತು ತಾನುರಿದು, 
ತನ್ನೆಲ್ಲ ಬಿಸಿಯ ಎನಗಾಗಿ 
ಧಾರೆ ಎರೆಯುವ  
ತಪಸ್ವಿಯಂತೆ ನಿರಂತರ... 

ಕಷ್ಟದ ಕತ್ತಲಲಿ 
ನಾ ದೀಪ ಹಚ್ಚದಿದ್ದರೂ  
ನಾ ಮರೆತರೂ 
ತಾ ಮಿಂಚಿ 
ತನ್ನಿರುವ ತಾ 
ತೋರಿ ಮಿಂಚುವಳು 
ಮಿಂಚು ಹುಳುವಾಗಿ
ಕೈಗೆಟುಕುವ ಹತ್ತಿರವಾಗಿ 
ಕತ್ತಲಿಗೆ ಮತ್ತದೇ  
ಸರಳ ಸ್ಪಷ್ಟ ಉತ್ತರವಾಗಿ...    

ರುದ್ರಪ್ಪ... 

ಗುರುವಾರ, ಆಗಸ್ಟ್ 22, 2013

ಸ್ಪೂರ್ತಿ...

ನೆನ್ನೆಯು ಈ ದಿನಕೆ ಸ್ಪೂರ್ತಿಯಾಗಿರಲಿ, 
ನಾಳೆಗೆ ಈ ದಿನವು ಸ್ಪೂರ್ತಿಯಾಗಿರಲಿ...
ದಿನದಿಂದ ಮತ್ತೊಂದು ದಿನದ ಸ್ಪೂರ್ತಿದೀಪ ಬೆಳಗುತಿರಲಿ, 
ಚೈತನ್ಯದ ಬೆಳಕು ದಾರಿಯುದ್ದಕ್ಕೂ ನಿರಂತರವಾಗಿರಲಿ...

ರುದ್ರಪ್ಪ...

ನೋಟದ ಹಾರಾಟ,

ಕಣ್ರೆಕ್ಕೆಗಳ ಬಿಚ್ಚಿ 
ನೋಟದ ಹಾರಾಟ,
ಬೆಳಗಿನ ಬೆಳಕಿಗೆ 
ಪುಕ್ಕಗಳ ಬಡಿತ, 
ಕಣ್ಬಿಚ್ಚಿ ಎತ್ತರೆತ್ತರಕೆ 
ಹಾರಲಿ ನಿನ್ನ ನೋಟ,
ಆಗೊಮ್ಮೆ ಈಗೊಮ್ಮೆ
ಆಳಕ್ಕೆ ಧುಮಕಲಿ ಒಳನೋಟ,
ಸುಖಕರವಾಗಿರಲಿ ನಿನ್ನ
ಈ ದಿನದ ಹಾರಾಟ,
ಗೆಲುವಾಗಿರಲಿ ನಿನ್ನ
ಕಣ್ರೆಕ್ಕೆಗಳ ಪ್ರತಿ ಬಡಿತ ...

ರುದ್ರಪ್ಪ..

ಮುದ ಕನಸುಗಳು...

ಮುದ ಕನಸುಗಳು...

ಕಣ್ಮುಚ್ಚಿ ಕಣ್ತೆರೆಯುವ ಕನಸುಗಳು ,
ಹೊಸ ಬಣ್ಣದ ಉಡುಗೆ ಉಟ್ಟು
ತುಂಬು ಜೇಬಲ್ಲಿ ಆಸೆ ಹೊತ್ತು
ತನಗೆಂದೇ ಖುಷಿಯ ಹಬ್ಬದ ಖರೀದಿಗಳು... 

ಮೈಮರೆತೇ ಮಾಡುವ
ಮೂರೇ ಕಾಸಿಗೆ ಮೂರು ಲೋಕವ
ಕೊಂಡು ಮಾರುವ ವ್ಯವಹಾರ
ಮುಗಿಸಿಯೇ ಎಚ್ಚೆತ್ತುಕೊಳ್ಳುವ ...

ನಿದಿರೆಯು ಕೈ-ಕೊಡವುದಕ್ಕೆ ಮೊದಲು
ಕನಸೊಂದ ಹಾಡಿ ಮಲಗಿಸಲು
ಸುಪ್ರಭಾತವ ಸುಖನಿದ್ದೆಯಲಿ
ಕೇಳೋಣ ರೇಡಿಯೋ ಹಾಡಲು ...

ದಣಿದ ಮನವು ನಿದ್ರಿಸಲಿ
ಇಂದೊಮ್ಮೆ ಮತ್ತೊಮ್ಮೆ
ಕನಸೊಂದು ಹುಟ್ಟಲು ಅರಳಿ ನಿಲ್ಲಲು
ವಿಹರಿಸಲು ಮೈಮರೆತು ಅಲ್ಲೊಮ್ಮೆ ಇಲ್ಲೊಮ್ಮೆ ...

ರುದ್ರಪ್ಪ...

ನೋವು...

ನೋವು...

ಬೇನೆಯ ಅಡ್ಡ ಮಳೆ-ಗಾಳಿಯಲ್ಲಿ 
ಅಡ್ಡಲಾಗಿ 
ಆಟಪತ್ರ ಹಿಡಿದು ನಡೆವ ಬದುಕು 
ಮಣ್ಣಿನ ಮನೆ ಸೇರಿದಾಗ 
ಉಟ್ಟ ಬಟ್ಟೆಯೆಲ್ಲ ನೆನೆದಿತ್ತು...

ಒಮ್ಮೆ ಗಾಳಿಗೆ ಒಮ್ಮೆ ಮಳೆಗೆ 
ಮೈಯೊಡ್ಡಿ ನಿಂತ 
ಆಟಪತ್ರ ಕೂಡ
ಮುದುಡಿ ಮೂಲೆ ಸೇರಿ
ಹನಿ ಹನಿಯಾಗಿ ಅಳುತ್ತಿತ್ತು...

ರುದ್ರಪ್ಪ...
ಒಬ್ಬ ಬರಹಗಾರ ಹುಟ್ಟಿ ಬೆಳೆಯೋಕೆ ಭಾವ ಅಮ್ಮನಾದರೆ , ವಿಮರ್ಶೆ ಅಪ್ಪನಿದ್ದಂತೆ ...

ರುದ್ರಪ್ಪ...

ಬೆತ್ತಲಾಗಿ

ನೀ ದೂರ ಹೋದಾಗಿನಿಂದ ಕೈ ಬಿಡಿಸಿಕೊಂಡು 
ವಿರಹದ ತಡೆಯಲಾರದ ಚಳಿಗೆ ಮೈಯೊಡ್ಡಿ 
ಬೆತ್ತಲಾಗಿ ನಿಂತಿವೆ ಭಾವನೆಗಳು ಅರ್ಥ ಕಳಚಿಕೊಂಡು...

ರುದ್ರಪ್ಪ...

ಚಿರಂಜೀವಿ ...

ಚಿರಂಜೀವಿ ...

ನೆನ್ನೆ ನನ್ನ ಹಳೆಯ ಕೂಡಿಟ್ಟ ಹಾಡುಗಳಲ್ಲಿ ಒಂದು ಹಾಡು ಗಮನ ಸೆಳೆಯಿತು...

"ಆಡಿಸುವಾತ ಬೇಸರಗೊಂಡು ಆಟ ಮುಗಿಸಿದ"...

ಈ ಹಾಡಿನ ತುಣುಕಿನಲ್ಲಿ ಒಂದು ಧನಾತ್ಮಕ ಭಾಗ ಇದೆ, ಆಡಿಸುವಾತನಿಗೆ ಬೇಸರ ಆಗದೆ ಇರೋ ಹಾಗೆ ನೋಡ್ಕೊಂಡ್ರೆ ನಾವು ಚಿರಂಜೀವಿ:-) ಆಹಾ! ಸಾವಿಗೆ ಎಂಥ ಔಷಧಿ !! ಅವನಾಟಿಗೆಯ ಒಳಗೆ ಅವನು ಜೀವ ತುಂಬಿ ಕಳಿಸೋದು ಜೀವಂತವಾಗಿ ಬದುಕಲಿ ನೋಡಿದವರಿಗೆ ಒಳ್ಳೆಯ ಮನೋಭಾವವುಳ್ಳ ಮನೋರಂಜನೆಯಾಗಿರಲಿ ಅಂತನೇ ಹೊರತು ಆಗೊಮ್ಮೆ ಈಗೊಮ್ಮೆ ಮತ್ತೊಮ್ಮೆ ಮಗದೊಮ್ಮೆ ಸೋತು ಸತ್ತು ಬದುಕಲಿ ಅಂತ ಅಲ್ಲ. ಅವನಿಗೆ ಬೇಸರ ಆಗೋದು ಕೂಡ ಅದೇ ಕಾರಣಕ್ಕೆ.

ಮುಂದಿನ ಪ್ರಶ್ನೆ ಏನಪ್ಪಾ ಅಂದ್ರೆ, ಅವನನ್ನ ಹೇಗೆ ಬೇಸರ ಬರದೆ ಇರೋ ಹಾಗೆ ನೋಡ್ಕೊಳ್ಳೋದು? ಅನುಭವಕ್ಕೆ ಬರೋ, ನಮ್ಮ ಇತಿ ಮಿತಿಯಲ್ಲಿರೋ,ಕಷ್ಟನೋ-ಸುಖಾನೋ, ಪ್ರತಿಯೊಂದು ಕ್ಷಣದಲ್ಲಿ ನಾವು ಗೆಲುವಾಗಿ ಇದ್ರೆ ಅದೇ ಅವನಿಗೆ ಒಂಥರಾ ಮನೋರಂಜನೆ. ಏನಪ್ಪಾ ಇವನಿಗೆ ಇಷ್ಟು ಕಷ್ಟ ಕೊಟ್ರು ಇನ್ನು ಗೆಲುವಾಗೆ ಇದಾನೆ!!, ಇನ್ನೊಂದು ಪರೀಕ್ಷೆ ಕೊಡೋಣ ಅಂತ ಮತ್ತೆ ತನ್ನ ಆಟ ಮುಂದುವರೆಸ್ತಾನೆ. ತನ್ನ ಸುಮ್ಮನೆ ಉರುಳಿಹೋಗದ ಆಟಿಗೆಗಳನ್ನ ಅವನು ಬೇಸರಗೊಂಡು ಮಾಡಿಲ್ಲ, ಉತ್ಸುಕತೆಯ ಮಡಿಲ್ಲಲ್ಲಿ ಎತ್ತಿ ಆಡಲು ಬಿಟ್ಟಿಹ...

ಆಟದಲ್ಲಿ ಅನ್ವೇಷಣೆ, ಕಷ್ಟ, ಸೋಲು, ಒಂದರ ನಂತರ ಮತ್ತೊಂದು ಹಂತಗಳು ಇರಲೇಬೇಕಾದಂತ ಭಾಗಗಳು.

ರುದ್ರಪ್ಪ...

ದಿನಚರಿ...

ದಿನಚರಿ... 

ತಿರುಗಿ ನೋಡುವ ಬನ್ನಿ 
ಇತಿಹಾಸ ತಿರುವಿ ತಿರುವಿ 
ಘಮ ಘಮಿಸಲಿ 
ದಿನಚರಿಯು, ಕಂಡ 
ಕನಸುಗಳ ಸುಮವೆಲ್ಲ 
ಹರವಿ ಹರವಿ ... 

ಕನಸು ಮರಳುಗಾಡಿನ 
ಮರೀಚಿಕೆಯಾದರೂ, 
ಮನಸು ಕಾನನದ 
ಜಿಂಕೆಯಂತಿರಲಿ...

ರುದ್ರಪ್ಪ... 

ಬಾಕಿ

ಬಾಕಿ 

ದಿಗಂತದ ಹೊಸ ಆಮಿಷ 
ಮತ್ತೊಮ್ಮೆ ಕಣ್ತೆರೆಸಿದೆ 
ಸುಖಾಂತದ ಹಳೆಯ ಬಾಕಿ 
ಇಂದಾದರೂ ತೀರಿಸಬೇಕಿದೆ... 

ರುದ್ರಪ್ಪ... 

ಅವಳು ...

ಅವಳು ... 

ಎಷ್ಟೋ ಬಾರಿ ನಗುವಳು 
ಕೊನೆಯಿಲ್ಲದಂತೆ ಮಾತಾಡುವಳು 
ಏನೇನೋ ಗುನಗುನಿಸುವಳು 
ಕಾರಣ ಇಲ್ಲದೆ ಕೋಪಿಸಿಕೊಂಡವಳು 
ಒಮ್ಮೆ ತುಸು ದೂರ 
ಮತ್ತೊಮ್ಮೆ ಮತ್ತಷ್ಟು ಹತ್ತಿರ 
ಸದಾ ನನ್ನವಳು ಎನ್ನುವಷ್ಟು ಸಲುಗೆ 

ಇಂದೂ ಆವರಿಸಿರುವ 
ಅದೇ 'ಮೌನ' 
ಸುಮ್ಮನಿದ್ದಾಳೆ, ಏನೂ ಮಾಡುತ್ತಿಲ್ಲ 
ಮತ್ತೆ ಅನಾಯಾಸವಾಗಿ 
ಅವಳನ್ನೇ ಹುಡುಕುತ್ತಿದ್ದೇನೆ ... 

ರುದ್ರಪ್ಪ ...

ರಾತ್ರಿ

ರಾತ್ರಿ ಅದೆಷ್ಟು ಅತ್ತಿತ್ತೋ 
ಇನ್ನು ತೇವ ಆರಿಲ್ಲ... 
ಕಥೆ ಹೇಳಿತು ಕಾಲಡಿಗೆ 
ಇಬ್ಬನಿಯೊಸರಿದ ಹುಲ್ಲೆಲ್ಲ...


ರುದ್ರಪ್ಪ... 

ಅಭಯ...

ಅಭಯ... 

ಭಯಪಡಬೇಡ ಗೆಳತಿ 
ನಿನ್ನ ಮನದಲ್ಲಿ 
ದಂಗೆಯೇಳುವ ತುಮುಲಗಳ 
ಹತ್ತಿಕ್ಕಲು 
ನಿನಗೆಂದೇ ಎನ್ನ 
ಕನಸುಗಳ ದೊಡ್ಡ 
ಮೀಸಲು ಪಡೆಯಿದೆ... 

ಆಸೆ ಕಟ್ಟಿ ಕಂಡ 
ನಿನ್ನೆಲ್ಲ ಕನಸುಗಳಿಗೆ, 
ನನ್ನೆಲ್ಲಾ ಆಸೆಗಳ 
ಅನಿಯಮಿತ ಅಭಯವಿದೆ... 

ರುದ್ರಪ್ಪ...

ನನ್ನ ಹಾಡು ...

ನನ್ನ ಹಾಡು 

ಯಾವ ಹಾಡು ಹಾಡಲಿ 
ನಾ ನಿನಗಾಗಿ? 
ಆ ಪ್ರೆಮರಾಗವೇ 
ಒಲಿದಿದೆ ಎನಗೆ ನೀನಾಗಿ, 
ನೀ ಒಳ ಹೊರ ಆಡುತಿರೆ 
ನನ್ನ ಉಸಿರಾಗಿ 
ಆ ಉಸಿರೇ 
ಸುಯ್ಯನ್ನುತಿದೆ ಹಾಡಾಗಿ... 

ಬಾ ಕೇಳು ಬಾ ಕಿವಿಯಿಟ್ಟು 
ನಿನ್ನಿಂದ ನಾ ಗಾಯಕನಾದೆ 
ಗೊತ್ತಿಲ್ಲದೆ ನೀ ನನ್ನ 
ಉಸಿರಿಗೆ ಇಳಿದು 
ಪ್ರೇಮ ಪಲ್ಲವಿಯಾ 
ಮಧುರ ಗಾಯನವಾದೆ ... 

ರುದ್ರಪ್ಪ ...

ನೀ ನಗು...

ಗೆಳತಿ, ನೀ ನಗುತಿರು 
ಲೋಕದ ಕಷ್ಟಗಳಿಗೆ 
ಕಷ್ಟವೆನಿಸುತ,

ಒಳಗೊಳಗೇ ಒಣಗಿದ 
ಜೀವಕೆ ನಗುವಲ್ಲೇ 
ಜೀವ ತುಂಬುತ ... 

ಮನ ಸೋತಿದೆ 
ನೋಡು ನಿನ್ನ 
ಮನ ಅರಳಿಸುವ ನಗುವಿಗೆ, 

ಗೆದ್ದಂತೆ ನಸುನಕ್ಕು 
ಎನ್ನ ಬಿಟ್ಟೋಡದಿರು 
ಒಳ ಪುಳಕಿಸುವ ನೆನಪಿಗೆ.... 

ರುದ್ರಪ್ಪ...

ಕನಸು ...

ಸಾಕಪ್ಪ ಈ 
ಕನಸುಗಳ ಸಹವಾಸ,
ಬಣ್ಣ ಹಾಕಿಯೇ 
ಹುಟ್ಟುವವು ಪ್ರತಿದಿವಸ,
ಬಣ್ಣ ಕಳಚಿ ಬೆಳಕಿನಲ್ಲಿ 
ಮುಳುಗುವವು,
ಕತ್ತಲು ಸಾಧಿಸಿ 
ಮತ್ತೇರುವವು ,
ಸಮ್ಮೋಹಿಸುತ 
ಮತ್ತೆ ಮತ್ತೇರಿಸುತ ... 

ರುದ್ರಪ್ಪ ...

ಯಾರು ?

ಯಾರು ?

ಪ್ರತಿ ಭಾವವ 
ಎತ್ತಿ ಮುದ್ದಾಡಿ 
ಲಾಲಿ ಹಾಡುವ 
ನಾನು ಭಾವುಕನೋ ?
ಆ ಲಾಲಿಗೆ 
ಮಗುವಂತೆ ಮಲಗುವ 
ನೀನು ಭಾವುಕಳೋ ?
ಅರ್ಥವಾಗುತಿಲ್ಲ ಗೆಳತಿ ... 

ರುದ್ರಪ್ಪ ...

ಹುನ್ನಾರ ...

ಹುನ್ನಾರ ... 

ರಾಜಕುಮಾರಿ ಎನ್ನಲಾ 
ನಾನೊಬ್ಬ ಬಡವ 
ಕಿನ್ನರಿ ಎನ್ನಲಾ 
ನಾನೊಬ್ಬ ಹುಲುಮಾನವ 
ಉತ್ಪ್ರೇಕ್ಷೆಯಾ ಒಡನಾಟ 
ಕನಸುಗಳ ಹುನ್ನಾರ 
ನಿನ್ನ ನನಗರಿವಿಲ್ಲದೆ 
ಎಳೆದೊಯ್ಯುತಿವೆ ದೂರ ... 

ರುದ್ರಪ್ಪ ...

ಕೂಸು ...

ಕೂಸು ... 

ಮೌನವ ತೊಟ್ಟಿಲಿಗೆ ಹಾಕಿ 
ಸದ್ದಿಲ್ಲದೆ ತೂಗಿ 
ಒಂದು ಮುದ್ದಾದ 
ಹೆಸರಿಡೋಣ ಬಾರೆ, 
ಕಿವಿಯಲ್ಲಿ ಮೂರು ಬಾರಿ 
ಕೂಗಿ ಸಂಭ್ರಮಿಸೋಣ ಬಾರೆ ... 

ರುದ್ರಪ್ಪ ..

ಮಿಲನ ...

ಮಿಲನ ... 

ಅನತಿ ದೂರದ 
ಸಮುದ್ರ,
ಪುಟಿ ಪುಟಿದು 
ಕೈ ಅಗಲಿಸಿ 
ಓಡುವ ತೊರೆಯ 
ಒಂದೆಡೆ ಸೇರಿ ನಿಲ್ಲುವ 
ಉತ್ಸಾಹ, 
ತಾ ಉಪ್ಪಾಗುವ 
ಸಂಭ್ರಮ,
ತನ್ನ ತಾ ಕಳೆದುಕೊಳ್ಳುವ 
ಉತ್ಸವ ... 

ರುದ್ರಪ್ಪ

ನಗುವು...

ಮಧುರ ಪ್ರೇಮ ಪರ್ವದ 
ನೀಲನಕ್ಷೆಯಂತೆ ನಿನ್ನ ಮೊಗವು 
ಅದರೊಳಗಿನ ದಿಕ್ಸೂಚಿಯಂತೆ ಆ ನಿನ್ನ ನಗುವು...


ರುದ್ರಪ್ಪ

ಮುಂಗಾರು ..

ಮುಂಗಾರು .. 

ನನ್ನ ನೀನು
ನಿನ್ನ ನಾನು
ನೆನೆಸುವ
ಈ ಜಿಟಿ ಜಿಟಿ
ಮೌನ ಮುಂಗಾರಿನಲಿ

ಮೌನ ನಿಂತಾಗ 
ಮಾತಿನವಕಾಶದ ಪ್ರಯೋಗ 
ತಂದ ರಸನಿಮಿಷದ ಫಲವತ್ತತೆ 

ಭಾವ ಬಿತ್ತನೆಗೆ 
ಸಮಯ, ಅವಕಾಶ, ಆಶಯ

ಹೂತಿರುವ ಭಾವ
ಮೊಳಕೆಯೊಡೆಯಲಿ
ಮಿಂದ ಮೆದು ಹೃದಯಗಳು 
ಭಾವಸ್ಪರ್ಷದ ಸಲ್ಲಾಪದಲಿ


ರುದ್ರಪ್ಪ...

ಅನಾ(ಆ)ವರಣ

ಅನಾ(ಆ)ವರಣ 

ಚುಚ್ಚುವ ಛಳಿಯಲಿ 
ಹೊದಿಸಿದ ರೇಷ್ಮೆಯಂತೆ 
ಆವರಿಸಿದೆ ಅವಳೊಲವು ... 
ಮೂರ್ತಿಯ ಮೇಲಿಂದ 
ಅದೇ ಶಾಲು ಜಾರಿ 
ಅನಾವರಣಗೊಳ್ಳುತಿದೆ ನನ್ನೊಳವು,.. 

ರುದ್ರಪ್ಪ ...

ಮಳೆ

ಮಳೆ 

ಸುರಿಯುವ ಮೋಡ 
ಸುರಿದಷ್ಟೂ ಹಿತವಾಗಿದೆ 
ನೆನೆಯುವ ಮನವು 
ನೆನೆದಷ್ಟು ಮಜವಾಗಿದೆ 

ರುದ್ರಪ್ಪ...

ವಯ್ಯಾರ ...

ವಯ್ಯಾರ ... 

ಬಿದ್ದು ಹರಿಯುವ 
ನೀಲಿ ಬಾನಿಗೆ 
ಅವಳ ವಯ್ಯಾರ ಬಂದಿದೆ 
ನನ್ನಾಸೆಯ ಬಣ್ಣ ಬಣ್ಣದ 
ಕಾಗದದ ದೋಣಿ 
ಅವಳ ಹಿಂದೆ ನೆನೆ ನೆನೆದು 
ಮುಂದೆ ಸಾಗಿದೆ 

ರುದ್ರಪ್ಪ...

ಸೀರೆ

ಸೀರೆ

ಸೀರೆ ನೀರೆಯುಡುಪಿನ 
ಪಟ್ಟದ ರಾಣಿಯಂತೆ,
ಅದನುಟ್ಟು ನಡೆವ ನೀನು
ನನ್ನುಸಿರಿನ ನೀರಿಗೆಗಳ 
ಕೈ ಹಿಡಿದು 
ನಡೆಯುವ 
ನುಡಿಯುವ 
ಮಧುರ ವೀಣೆಯಂತೆ...

ರುದ್ರಪ್ಪ...

ಹಣತೆ

ಹಣತೆ ರಾತ್ರಿಯೆಲ್ಲಾ ಮಾಡಿದ ಅಚಲ ತಪಸ್ಸಿಗೆ ಫಲ ಸಿಕ್ಕಿದೆ, ಸೂರ್ಯ ಮೂಡಿ ಬಂದ ಮತ್ತೊಮ್ಮೆ ಮೂಡಣದಲ್ಲಿ... ಶುಭೋದಯ

ಜೋಗುಳ...

ಜೋಗುಳ...

ಆ ಸುಖನಿದ್ದೆಯ ಸಂಗೀತಕೆ 
ನೀ ರಾಗವಾಗಿ
ನೀ ತಾಳವಾಗಿ 
ನೀ ಲಯವಾಗಿ
ನಿನ್ನದೇ ನೆನಪಿನ ಜೋಳಿಗೆಯಲಿ 
ನೀನಿಲ್ಲದೆ ಅಳುವ
ನನ್ನ ಕನಸುಗಳ ತೂಗು ಬಾ ...

ಶುಭರಾತ್ರಿ ...

ನಕ್ಷತ್ರ ...

ನಕ್ಷತ್ರ ... 

ನಡೆದಾಡುವ ನಕ್ಷತ್ರ
ನಾನು ರಾತ್ರಿಯಾಗಸದಲಿ,
ರಾತ್ರಿಯೆಲ್ಲ ಅವಳ ಮೊಗ
ಕಂಡು ಭೂಮಿಯಲಿ, 
ನಾ ಮಿಂಚುತಿದ್ದೆ
ಮಂದಹಾಸದಲಿ... 
ಅವಳನ್ನೇ ನೋಡುತ
ಅವಳ ಮೇಲೆಯೇ ಉದುರಿದ್ದೆ 
ಅಸೂಯೆಯಾ ಅಡ್ಡಗಾಲಿಟ್ಟ 
ಚಂದ್ರನ ಎಡವುತಲಿ... 

ರುದ್ರಪ್ಪ....

ಮುಷ್ಕರ...

ಮುಷ್ಕರ... 

ಆ ಸಿಹಿದನಿಯ ಬೇಡಿಕೆ 
ಬಾರದ ಸಿಹಿನಿದ್ದೆಗೆ 
ಮುದ ಕನಸುಗಳ ಮುಷ್ಕರ 
ಆ ಸವಿನುಡಿಯ ಲಾಭದ ಪಾಲಿಗೆ ... 

ಕೆಲಸ ನಿಂತಿಹುದು ಬೀಗ ಜಡಿದು 
ಬೇಗ ದನಿಯೊಡೆದು ನೂಕಿ ಬರಲಿ ಎಂಬಾಸೆಗಳಿಗೆ 
ನಿರಂತರ ನಿನ್ನದೇ ಖಯಾಲಿ 
ಕನಸಿನ ಕಾರ್ಖಾನೆಯ ಕಾರ್ಮಿಕರಿಗೆ... 

ರುದ್ರಪ್ಪ...

'ಹನಿ'ಗವನ

'ಹನಿ'ಗವನ 

ಒಲವಾಮೃತದಂಬುಧಿಯ 
ನಟ್ಟ ನಡುವೆ ನಡೆಯಿತಿಂದು ಮಂಥನ 
ಅಲೆಗಳಾಗಿ ಹುಟ್ಟಿ ಬಂದ 
ತೆರೆಯ ಮರೆಯ ಹನಿಗಳಿಂದು ಕವನ 

ರುದ್ರಪ್ಪ...

ಅವಳಾರು ...

ಅವಳಾರು ...

ಒಮ್ಮೆ ಕನಸಿನ ಬಾಗಿಲಲಿ
ಬೊಗಸೆ ದೀಪದ ಬೆಳಕಿನಲಿ
ನನಗಾಗಿ ಕೂತು ಕಾಯುವಳು
ನನ್ನದೇ ಖಯ್ಯಾಲಿಯಲಿ...

ಮತ್ತೊಮ್ಮೆ ಅದೇ
ಕನಸಿನ ಪರದೆ ಸರಸಿ
ಸರಸ ಸಾಮ್ರಾಜ್ಯದ ಅರಸಿಯ
ಪಾತ್ರಳಾಗುವಳು 

ಆಗೊಮ್ಮೆ ಈಗೊಮ್ಮೆ
ದಿನದ ಕಿಟಕಿಯೊಂದರ
ಬೆಳಕಿಗೆ ಅಡ್ಡಲಾಗಿ ಮುಂದೆ ನಿಂತು
ಜಡ ನಿದ್ದೆಯ ಷರತ್ತಿಗೆ ಅಡ್ಡಿ ಪಡಿಸುವಳು

ದಿನದ ಗಡಿಬಿಡಿಯಲಿ
ಹಾರಿ ಹೋದ ಬಾನಾಡಿಯವಳು 
ಒಂಟಿಯನಿಸುವ ಮುನ್ನವೇ
ಮತ್ತೆ ಗೂಡಿನ ಬಾಗಿಲು ತಟ್ಟುವಳು 

ಇಬ್ಬರು ಕಾಲಿಟ್ಟು ಕಟ್ಟಿದ 
ಮರಳು ಗೂಡಿನ ಮುಂದೆ
ಬೆರಳು ಅರಳಿಸಿದ
ನನ್ನೆದೆ ಗೂಡಿನ ಹಸಿ ಹೆಸರು ಅವಳು 

ಯವ್ವನದ ಹೊಸಿಲಲಿ ಕನಸುಗಳ
ಯುಗಾದಿಯಾಗಿ ಬಂದವಳು 
ಖುಷಿಗೆ ಖರ್ಚಿಲ್ಲದೆ 
ಕಣ್ಣಿಗೆಲ್ಲ ಹಬ್ಬದಂತಿಹಳು ... ನನ್ನವಳು ... 

ರುದ್ರಪ್ಪ...

ಅವಳ ಹಾಡು ...

ಅವಳ ಹಾಡು ...

ಎನ್ನ ಕವಿತೆಯೊಡತಿಯೇ!
ಬಿಳಿಮುಗಿಲ ಬಾಂದಳದಲಿ 
ಏಳುತಿಹೆ ನಾನು
ನಿನ್ನ ಭಾವ- ಗುಂಗಿನಲಿ 

ನಿನ್ನನೊಮ್ಮೆ ಹಾಡುವಾಸೆ
ಕಣ್ಣುಜ್ಜುವ ರಾಗದಲಿ
ಕಣ್ಬಿಡುವ ತಾಳದಲಿ
ಭಾವ ಹೊದ್ದು ಮಲಗುವ
ಪದಗಳ ನಸು ನಗುವಲಿ... 

ಹೇಳು ಈ ನಿನ್ನ ಹಾಡು 
ನಿನ್ನ ದನಿಯಿಲ್ಲದೆ ನಾ ಹೇಗೆ ಹಾಡಲಿ ?

ರುದ್ರಪ್ಪ...
ನೆನ್ನೆ ನಿಲುಕದೆತ್ತರವ ನಿಲುಕಲು, ನೆನ್ನೆಗಿಂತ ಹೆಚ್ಚು ಇಂದು ಬೆಳೆದು ನಿಲ್ಲುವ .... 

ರುದ್ರಪ್ಪ...

ಸನ್ನೆ ...

ಸನ್ನೆ ... 

ಕಾಯುತಿಹೆ ಕೂತು 
ಬಕ ಪಕ್ಷಿಯ ಹಾಗೆ 
ತನ್ನ ಕೆನ್ನೆಯ 

ಮುಂದೆ ಮಾಡಿ 
ಎನ್ನ ಮನದನ್ನೆಯ 
ಬಾ ಕೊಡು 
ಎನ್ನುವ ಸನ್ನೆಯ 

ರುದ್ರಪ್ಪ...

ಪ್ರಣಯ ಗಣಿತ

ಸಾಂಗತ್ಯದ 
ಪ್ರಣಯ ಕಾಲ ಕಳೆಯುತ 

ಸುಖದ 
ಒಡನಾಟದ ಕಷ್ಟಗಳ ಭಾಗಿಸುತಲಿ 

ಕನಸ ಬಿಟ್ಟು 
ನೀ ಕೂಡಲೊಲ್ಲೆ ಕಾಡಲೊಲ್ಲೆ 
ನಮ್ಮಿಬ್ಬರ ಮೊತ್ತದ ಮತ್ತಿನಲಿ... 

ನಾ ಮತ್ತೆ 
ಉಳಿದು ಹೋದೆ ಉಳಿದಷ್ಟೇ ಶೇಷದಲಿ... 

ರುದ್ರಪ್ಪ...

ವಾರಾಂತ್ಯ

ವಾರಾಂತ್ಯ ಒಂದು ನವ ಉಲ್ಲಾಸದ ಆರಂಭಕ್ಕೆ ನಾಂದಿ ಹಾಡಲಿ
ನಿಮ್ಮ ಮನಸ್ಸು ಆಪ್ತರ ಆಗಸದಲಿ ರೆಕ್ಕೆ ಬಿಚ್ಚಿ ಸ್ವಚ್ಛಂದವಾಗಿರಲಿ ....  

ರುದ್ರಪ್ಪ...

"ನನ್ನ ಕವನ"

"ನನ್ನ ಕವನ"

"ಅವಳು" ಎಂಬ ಕವನದಲಿ 
ಪ್ರತಿ ಬಾರಿ ಓದಿ 
ಕರೆತರುತಿದ್ದೆ ಅವಳನ್ನ
ಸಭೆಯಲಿ ... 

ಈ ಬಾರಿ 
ತನ್ನ ತಾ ಓದಿಕೊಳ್ಳುತ 
ಅವಳೇ ಎನ್ನ ಕೈ ಹಿಡಿದಳು 
ಕವಿಗೋಷ್ಠಿಯಲಿ ... 

ರುದ್ರಪ್ಪ....

ಇಂದು ...

ಇಂದು ... 

ಅವಳ ಮುಖದಂಗಳದ ಮಂದಹಾಸದ ಸೋನೆ ಮಳೆಗೆ
ಪಾಚಿಗಟ್ಟಿದ ನನ್ನ ಹೃದಯದಲಿ ಅವಳೇ ಜಾರಿದ ಘಳಿಗೆ 

ರುದ್ರಪ್ಪ...

ಅವಳ ಬಿಂಬ...

ಅವಳ ಬಿಂಬ...

ನೆಲಕೆ ಬಿದ್ದ ಕಣ್ಣೀರ ಹನಿಗಳೇ ಆವಿಯಾಗದಿರಿ ಬೇಗ...
ಅವಳಂತೆ ಅವಳ ಬಿಂಬ ಕಣ್ಮರೆಯಾಗದಿರಲಿ ಈಗ... 

ರುದ್ರಪ್ಪ..

Woh quabon ka khula aasmaan,

Woh quabon ka khula aasmaan,
Na tera hua
Na mera hua
Sirf ban ke reh gaya dhua dhua
Yahan wahaan, yahaan wahaan...
Hum tum kuch hi doori mein
Ban ke reh gaye sirf sitaare...sirf sitaare....

Rudrappa...
छुप छुप कर छुप्पा छुप्पी खेलते थे
इंसानों में रूह दूंडते फिरते थे
बहुत दिनों के बाद खुले में खेलने का मन है
आज दूंढ़ रहे हैं और एक छुपा रूह इस मज़ार में ...

रुद्रप्पा ...

ಧಾರೆ...

ಧಾರೆ...

ಮೂಡಣದಿಂದ ಭೂಮಿಗೆ 
ಬಾಗಿದ ಭಾನುವಿನ 
ಬಿಳಿ ಹಾಲ ಬೆಳಕ ಧಾರೆ 
ಭೂ ಸ್ಪರ್ಶದಿ ನಾಚಿ 
ಕೆನ್ನೆ ಕೆಂಪೇರಿದ ಭಾನು 
ಹೊಸದಿನದ ಹೊಸಿಲಲಿ 
ಹೊಸಬಾಳಿಗೆ ಬೆಳಕಾದ 
ಸಂಭ್ರಮದಲಿ ತಾನು ...

ಬೆಳಗಿನ ವಂದನೆಗಳು...

ರುದ್ರಪ್ಪ...

ನಿನ್ನ

ಮೈಮುರಿದು 
ಕಣ್ಬಿಡುವ ವೇಳೆಗೆ 
ಬಿಸಿ ಬಿಸಿಯಾಗಿ 
ನೀ ತಂದಿಟ್ಟ, ತುಂಬಿಟ್ಟ 
ಚಹ ಹೀರಿ, 
ಎಂದೂ ಕರಗದೇ 
ಕೊನೆಯಲ್ಲಿ ಉಳಿಯುವ 
ಆ ನಿನ್ನ ಮುಸುನಗುವ ಕಾಣಲು 
ತಡಕಾಡುತಿರುವೆ
ಖಾಲಿ ಖಾಲಿ ಕಪ್ಪಿನೊಳವ... 

ಶುಭೋದಯ...

ಅವಳು

ನನ್ನ ಕಿರುತೆರೆಯ ಕನಸೊಂದ 
ಬೆಳ್ಳಿಪರದೆಗೆ ಜಾರಿಸಿದ ಮಾಂತ್ರಿಕಳು, 
ಉಸಿರಿಲ್ಲದ ಬಣ್ಣ ಬಣ್ಣದ ಬಲೂನಿನ ಆಸೆಗಳಿಗೆ 

ಊದಿಸಿ ಉಬ್ಬಿಸಿ ಹಾರಿ ಬಿಟ್ಟ ಕಿನ್ನರಿ ಅವಳು ... 
ಮರುಕಳಿಸಿಹಳು ಒಮ್ಮೆ ನನಸಾಗಿ ಇನ್ನೊಮ್ಮೆ ಉಸಿರಾಗಿ...
ತೇಲಿ ಬಿದ್ದಿಹೆನು ಒಮ್ಮೆ ಕಲ್ಪನೆಯಾಗಿ ಮತ್ತೊಮ್ಮೆ ಬಲೂನಾಗಿ...

ರುದ್ರಪ್ಪ...

ನೀ ಮೌನ, ನಾ ಮೌನಿ!!!

ನೀ ಬಂದೆ ಮಾತಿಲ್ಲದೆ ಮಾತಾಡುವ ಹೊತ್ತು, ಮೌನವಾಗಿ ನನ್ನೆದೆಯಲಿ ನಿಂತುಬಿಟ್ಟೆ !!... ನಿನ್ನನ್ನೇ ಮೌನವೆಂದರು! ನನ್ನನ್ನೇ ಮೌನಿಯೆಂದರು !!!

ಕನಸಿಗೆ ...

ಕನಸಿಗೆ ...

ತಲೆ ಇತ್ತು 
ನಿದ್ರಿಸು ಬಾ ಎನ್ನೆದೆಯಲಿ 
ಮುದ ಹೃದಯದ ದಿಂಬಿದೆ ...

ನನ್ನ ನಾಯಕಿಯಾಗಿ
ಬಾ ಕನಸಲಿ,
ಒಂದು ಕಿರು- ಕಥೆಯಿದೆ...

ಶ್ವೇತಾಕ್ಷರಗಳ ಕವಿತೆಯಾಗಿ 
ಬಾ ಲಯದಲಿ 
ಒಳಗೊಂದು ಮಧುರ ಹಾಡಿದೆ..

ಕಣ್ಣು ಮುಚ್ಚಿ 
ಇಳಿದು ಬಾ ಹುಡುಕುತಲಿ 
ನನ್ನ ಕಲ್ಪನೆ ಅವಿತು ಕಾದಿದೆ ...

ನನ್ನ ಕನಸಿಗೆ 
ರಾಣಿಯಾಗಿ ಬಾ ಕೊನೆಯಲಿ 
ಇನ್ನೇನೂ ತಡ ಮಾಡದೆ ...

ರುದ್ರಪ್ಪ...

ಜೀವನದಿಯೇ

ಒಹ್ ಪಿಸುಮಾತಿನ ಜೀವನದಿಯೇ
ನನ್ನೊಡನೆ ಮಾತಾಗಿ ಹರಿಯುತಿರು 
ನೀನೊಮ್ಮೆ ತುಳುಕುವವರೆಗೆ,
ಮಾತಿನ ಉಸಿರೆಲ್ಲ ಮೌನವಾಗುವವರೆಗೆ ...

ರುದ್ರಪ್ಪ...

ನೆನಪು ...

ನೆನಪು ... 

ನೆನೆ ನೆನೆದು ಹಸಿಯಾದ 
ನೆನಪುಗಳನೆತ್ತಿಕೊಂಡು 
ಕಣ್ರೆಪ್ಪೆಯಿಂದ ಒರೆಸಿ 
ನಿಟ್ಟುಸಿರ ಬಿಸಿಗಾಳಿಗೆ
ಒಣಗಿಸುವಷ್ಟರಲ್ಲಿ,
ಕಣ್ಜಾರಿ ಬಿದ್ದ 
ಒಂದೆರಡು ನೆನೆ-ಹನಿಗಳು 
ಉಟ್ಟ ದೇಹವ ನೆನೆಸಿ 
ಆತ್ಮ ನಡುಗಿಸುತ್ತಿವೆ... 

ರುದ್ರಪ್ಪ

ಭಾವ-ಕರೆ ...

ಭಾವ-ಕರೆ ...

ಕರೆದಾಗ ಬಾರದೆ 
ನಿಮ್ಮಿಷ್ಟ ಸಾಧಿಸುವ
ಕಿವುಡ ಭಾವಗಳೇ 
ಇಂದೊಮ್ಮೆ ಬನ್ನಿ ಬದಲಾವಣೆಗೆ 

ಜ್ವರ ಬರುವಂತೆ 
ಒಲವಲ್ಲಿ ಮಿಂದೆದ್ದು 
ಮದ್ದಿಗೆ ಗುದ್ದಾಡುವ ಭಾವಗಳೇ 
ಮದ್ದಾಗ ಬನ್ನಿ ನೋವುಂಡ ಇನ್ನೊಬ್ಬರಿಗೆ ...

ಚಿತ್ರ ಬಿಡಿಸಿ ಅದರೊಳಗೆ ಕೂತು 
ಇಣುಕಿ ನನ್ನತ್ತ 
ನೋಡುವ ಭಾವಗಳೇ 
ಕೊನೆ ಹೇಳಿ ಕಣ್ತೆರೆಸದ ಕಣ್ಣ ಮುಚ್ಚಾಲೆಗೆ ...

ಬೇರೆಯವರಿಗೆ ಕೊಡದೆ 
ನಿಮ್ಮ ಕೆನ್ನೆಯ ನೀವೇ 
ಮುದ್ದಿ ಒದ್ದಾಡುವ ಭಾವಗಳೇ 
ಪಾತ್ರವಾಗ ಬನ್ನಿ ಬಯಲಿಗೆ ಎಲ್ಲರ ಪ್ರೀತಿಗೆ... 

ಬನ್ನಿ ಭಾವಗಳೇ ಬದಲಾವಣೆಗೆ 
ಭಾವಿಕಪ್ಪೆಯಾಗದೆ ನನ್ನೆದೆಗೆ ...

ರುದ್ರಪ್ಪ...

ಕಷ್ಟ ...

ಕಷ್ಟ ...

ಯಾರಿಗೂ ಕಾಣದಂತೆ 
ನನ್ನ ಕವಿತೆಯಲಿ 
ಆ ನಿನ್ನ ಮಧುರ ಪ್ರೀತಿಯ 
ನಾ ಎಲ್ಲಿ ಬಚ್ಚಿಡಲಿ ।।

ಎಲ್ಲೇ ಅಡಗಿಸಿದರೂ 
ಅನಾವರಣಗೊಳ್ಳುತಿದೆ 
ಎಂದೆಂದೂ ತನ್ನಿಷ್ಟಕೆ 
ಗೊಣಗುವ ಭಾವಗಳಲಿ,...

ಹೇಳು ಆ ನಿನ್ನ ಮಧುರ ಪ್ರೀತಿಯ 
ನಾ ಎಲ್ಲಿ ಬಚ್ಚಿಡಲಿ ।।

ಸುರಿದುಬಿಟ್ಟೆ ಅಕ್ಷರ ಸಾಲಿನ ಹಿಂದೆ 
ಯಾರಿಗೂ ಕಾಣದಿರಲಿ ಎಂದೇ 
ಅಡಗಿಸಿಹುದು ಸ್ಪಷ್ಟವಾಗುತಿದೆ 
ಆ ಪಾರ ದರ್ಶಕ ಸಾಲುಗಳಲಿ... 

ಹೇಳು ಆ ನಿನ್ನ ಮಧುರ ಪ್ರೀತಿಯ 
ನಾ ಎಲ್ಲಿ ಬಚ್ಚಿಡಲಿ ।।

ತಳ್ಳಿ ಬಿಳಿಯ ಬಾಗಿಲಿನ ಹಿಂದೆ 
ಕ್ಲಿಷ್ಟ ಪದಗಳ ಜಡಿದೆ 
ಹೊರಬಂತು ತನ್ನಷ್ಟಕೆ ಓದಿ 
ಹಾಡಿಕೊಳ್ಳುವ ಅಕ್ಷರಗಳ ಕೀಲಿಯಲಿ...

ಹೇಳು ಆ ನಿನ್ನ ಮಧುರ ಪ್ರೀತಿಯ 
ನಾ ಎಲ್ಲಿ ಬಚ್ಚಿಡಲಿ ।।

ಸಾಲುಗಳ ನಡುವೆ ಕಟ್ಟಿ ಹೂತಿಟ್ಟೆ 
ಕಾಣದ ಬಿಳಿ ಮೂಟೆಗಳಲಿ 
ಉಕ್ಕಿತು ಉಳಿದ ಶುಭ್ರ ಬಿಳಿಯ 
ಚಿತ್ತಾರವಾಗಿ ಕಪ್ಪಕ್ಷರಗಳ ಖವ್ವಾಲಿಯಲಿ...

ಹೇಳು ಆ ನಿನ್ನ ಮಧುರ ಪ್ರೀತಿಯ 
ನಾ ಎಲ್ಲಿ ಬಚ್ಚಿಡಲಿ ।।

ಬರೆದಾದ ಮೇಲೆ ಎಲ್ಲಿ ಬಚ್ಚಿಟ್ಟೆ 
ಎಂಬುದ ನಾ ಮರೆತು ಬಿಟ್ಟೆ 
ಬಾ ಮತ್ತೊಮ್ಮೆ ಕೊಟ್ಟುಬಿಡು 
ಈ ಹಿಂದೆ ಏನೇನು ಕೊಟ್ಟೆ ...

ಎಲ್ಲ ಕೊಟ್ಟಿದ್ದು ಬಚ್ಚಿಡುವೆ ಈ ಬಾರಿ 
ಕೊನೆಗೆ ಬರುವ ನನ್ನ ಹೆಸರಿನ ಹಿಂದೆ... 

ರುದ್ರಪ್ಪ...

ಕವಿತೆ...

ಕವಿತೆ...

ಬೆರಳಲ್ಲಿ ಪದೇ ಪದೇ 
ಪಲ್ಟಿ ಹೊಡೆಯುವ 
ಪದ, ಪೆನ್ನಿನ ಸರ್ಕಸ್ಸು,

ಗಾಳಿಯಲಿ ಗೀಚಿ 
ಒಮ್ಮೆ ಕಂಡು ಮತ್ತೊಮ್ಮೆ ಅಳಿಯುವ 
ಅವಳನ್ನೇ ಹೋಲುವ ಖಯಾಲಿ, 

ಎಷ್ಟೇ ವರ್ಣಿಸಿದರೂ 
ಅಳಿಯದೆ ಉಳಿಯುವ 
ಅಸಮಾಧಾನ,

ಆಗಾಗ ಪದಗಳಗೆತಕ್ಕೆ 
ಸ್ಪಂದಿಸುವ ತಲೆಕೆರೆತ,

ಅವಳತ್ತ ಕವಿತೆಯಾಗಿ 
ಗಾಳಿಗೆ ಹಾರಿ ಹೋದ 
ಹಾಳೆಗಳ ಫಳ ಫಳ ಸದ್ದು 

ಎಲ್ಲ ಸೇರಿ 
ಇಂದು ಇನ್ನೊಂದು ಕವಿತೆಯಾಯ್ತು...

ರುದ್ರಪ್ಪ...

ಒಲವು...

ಒಲವು...

ಛಳಿಯಲಿ ನಿನ್ನೊಲವಿನ 
ಮಳೆ ಹನಿಯ ಸಂಭ್ರಮ 
ನೆನೆದ ನನ್ನೆದೆಯ ನೆಲದಿ 
ಬಿಸಿಯುಸುರಿನ ಘಮ ಘಮ... 

ನಿನ್ನೊಲವಲಿ ಮಿಂದೆನ್ನ ಹೃದಯ
ಮೆದುವಾಯಿತಲ್ಲ ಈಗ,
ಮುದ್ದೆಯಾಗುವ ಮುನ್ನ
ತಬ್ಬಿ ತೀಡು ಬಾ ಬೇಗ!!

ರುದ್ರಪ್ಪ...

ಕೆಂಪು ಹಣತೆ

ಆಕೆಯ ಹಣೆಯಂಗಳದಲ್ಲಿ 
ಹಚ್ಚಿದೆ ಪ್ರೀತಿಯ 
ಕೆಂಪು ಹಣತೆ 
ಇಂದು ಅದಕೆ 
ನಾನೇ ಎಣ್ಣೆ 
ನಾನೇ ಬತ್ತಿ 
ಅವಳೇ ಬೆಳಕು!
ಆ ಬೆಳಕಲ್ಲೇ 
ನಮ್ಮ ಬದುಕು ...

ರುದ್ರಪ್ಪ..

ಹೆಸರು ...

ಪ್ರೀತಿಗಿಲ್ಲದ ಒತ್ತಕ್ಷರ 
ಒತ್ತಿ ಬರೆದಿದೆ ನಿನ್ನ ಹೆಸರ
ನೀನು ಮೂಡಲಿಲ್ಲ ಹೆಣ್ಣಾಗಿ 
ಉಳಿದೆ ಹಾಳೆಯ ಮೇಲೆ ಖಾಲಿ ಅಚ್ಚಾಗಿ... 

ರುದ್ರಪ್ಪ...

ಸಂಬಂಧಗಳು...

ಸಂಬಂಧಗಳು...

ಕೆಲವು ಘಟ್ಟಿ ಸಂಬಂಧಗಳು 
ಕರಗುತ್ತವೆ ಬಿಗುಮಾನದಲ್ಲಿ... 

ಇನ್ನುಳಿದವು 
ಬಿಗಿ ಮೌನದಲ್ಲಿ...

ರುದ್ರಪ್ಪ...

ಮಾಲಿನ್ಯ ...

ಮಾಲಿನ್ಯ ...

ಈಗಿನ ದಿನದಲ್ಲಿ 
ಎಷ್ಟೊಂದು ಪರಿಸರ ಮಾಲಿನ್ಯ 
ಕಣ್ಣೀರು ಸಹ 
ಸಪ್ಪೆ ಸಪ್ಪೆ ...

ರುದ್ರಪ್ಪ...

ಪ್ರೀತಿ...

ಪ್ರೀತಿ...

ನನ್ನ ಜಿಪುಣ ಜೇಬಿನಲ್ಲಿ 
ಖರ್ಚು ಮಾಡದೇ ಕಾಯ್ದಿಟ್ಟ 
ಘಟ್ಟಿ ನೋಟಿನಂತೆ 
ನಿನಗೆ ಕೊಡ ಬಯಸುವ 
ನನ್ನೆದೆಯ ಜೇಬಿನ ಪ್ರೀತಿ ...
ಖರ್ಚು ಮಾಡಲು ಕೊನೆಗೆ 
ಮನಸ್ಸು ಮಾಡಿದ್ದೇನೆ,
ಸ್ವೀಕರಿಸು ಬಾರೆ ಸುಮ್ಮನೆ !!!...ರುದ್ರಪ್ಪ...