ಶನಿವಾರ, ನವೆಂಬರ್ 12, 2011

ಏಕೆ?.. ಹೇಳಿ ಏಕೆ?





ಹಸಿದ ಹೊಟ್ಟೆಗಳು
ಹಸಿರೆಲೆಯ ಮೇಲೆ ಉಳಿದನ್ನದಲಿ
ಹರಿದಾಡುವಾಗ ಕಣ್ಮುಚ್ಚುವಿರಿ ಏಕೆ?
ಕಣ್ಬಿಟ್ಟು ಒಮ್ಮೆ ನೋಡಬಾರದೇಕೆ?

ಹೊರೆಯಾದ ಹೊಟ್ಟೆಪಾಡಿನ
ಹರೆಯವ ಕೆಂಪು ಬಣ್ಣದ ಬೆಳಕಿನ
ಮಡಿಲಲಿ ಮಲಗಿದ್ದು ಕಂಡು ಕಣ್ಮುಚ್ಚುವಿರಿ ಏಕೆ?
ಕಣ್ಬಿಟ್ಟು ಒಮ್ಮೆ ನೋಡಬಾರದೇಕೆ?

ಊಣ ಅಂಗಗಳ ಹೊತ್ತು
ರೋಗದಿಂದ ಬೇಸತ್ತು ಆಸರೆಯ ಕೇಳಿ ಕಾಸಿಗೆ
ಚಾಚುವ ಕೈಗಳ ನೋಡಿ ಕಣ್ತಿರುವಿ ದೂರ ನೂಕುವಿರೇಕೆ?
ಒಮ್ಮೆ ಕೈ ಹಿಡಿದು ನೋಡಬಾರದೇಕೆ?

ತೊಟ್ಟಿಯಲಿ ಬೇರೊಬ್ಬರ ತಪ್ಪನು ಹೊತ್ತು
ಕಸದಲ್ಲಿ ಮುಳುಗದೆ ಈಜಲು ಕೈ ಕಾಲು ಬಡಿಯುವ
ಕಂದಮ್ಮನ ಕಂಡು ಕಣ್ಮುಚ್ಚುವಿರಿ ಏಕೆ?
ಕಣ್ಬಿಟ್ಟು ಮಾನವೀಯತೆಯ ಮೆರೆಯದಾದಿರೇಕೆ?

ದ್ವೇಷ ಅಸೂಯೆಗಳ ಆರದ ಬೆಂಕಿಯಲಿ
ಸುಟ್ಟು ಕರಕಲಾಗಿ ಬೂದಿಯಾಗಿ
ಗಾಳಿಗೆ ಹಾರುವ ದೇಹಗಳ ಕಂಡು ಕಣ್ಮುಚ್ಚುವಿರೇಕೆ?
ಕಣ್ಬಿಟ್ಟು ಸೌಹಾರ್ದದ ತಂಪನೆರಚಿ ಆರಿಸದಾದಿರೇಕೆ?

ಕಣ್ಣು ಕಾಣದೆ ಬೆಳಕಿನಲಿ
ಕಾಣದ ಕೈ ಹುಡುಕುವ
ಹೃದಯಗಳ ಕಂಡು ಕೈಕಟ್ಟಿ ನಿಲ್ಲುವಿರೇಕೆ?
ಕೈ ಬಿಚ್ಚಿ ಕೈ ಹಿಡಿದು ಎರಡೆಜ್ಜೆ ದಾಟಿಸದಾದಿರೇಕೆ?

ದೂರ್ತ ದುಷ್ಟ ದಾನವ ಮೌಲ್ಯಗಳ
ನಡುವೆ ನಲುಗುವ ಮಲಗುವ
ಮನಸುಗಳ ಕಂಡೂ ತುಂಬು ಹೊದ್ದು ಮಲಗುವಿರೇಕೆ?
ಒಮ್ಮೆ ಮೌಲ್ಯದ ಮುಸುಕು ತೆಗೆದು ನೋಡಬಾರದೇಕೆ?

ರುದ್ರಪ್ಪ...







ಕಾಮೆಂಟ್‌ಗಳಿಲ್ಲ: