ಒಂಟಿತನದ ದ್ವೀಪದಿ
ಕೈಬಿಟ್ಟು ಕೈಕೊಡವಿ
ಕೈಬಿಡಿಸಿಕೊಂಡು ತಳ್ಳಿಹರು ಎನ್ನ
ಒಂಟಿಯಾಗಿ ಉಳಿವ ನನ್ನ
ಸುತ್ತುವರಿದ ನೋವು ಆಳವಾಗುತಿದೆ
ನೆನೆದು ತಿರುಗಿ ನೋಡದೆ ಹೋದವರನ್ನ...
ಸುತ್ತುವರಿದ ಅಸಾಧ್ಯವ,
ನೋವಿನ ನೀರಿನ ಆಳವ
ಮತ್ತದೇ ದಡಕೆ ತಳ್ಳುವ
ನೆನಪಿನಲೆಗಳ ಎದುರಿಸಿ
ಈ ಜೀವ ಈಜಿ ದಾಟಿ ಸುಪ್ತವ
ಬಯಕೆ ದ್ವೀಪವ ಸೇರುವ ...
ದಿನ ದಿನವು ಏರುವ ನೋವ
ನೀರಲ್ಲಿ ದ್ವೀಪ ಮುಳುಗುತಿದೆ
ಜೀವ ಅರಿವಿಗೆ ಜಾಗವಿಲ್ಲದೆ ಅಸುನೀಗುತಿದೆ
ಬೇರೊಂದು ನೆಲೆಗೆ ಸೇರಬೇಕೆನಿಸಿದೆ
ಅಲ್ಲಿ ಇಲ್ಲಿ ಗಾಳಿಯಲ್ಲಿ ಕೈಬಡಿದು
ರೆಕ್ಕೆಯಿಲ್ಲದೆ ಬರಿ ಆಸೆಗಳೆ ಹಾರುತಿದೆ
ಸೆಳೆವ ಆಳದಿ ಕುಸಿಯದೇ ಈಸಿ
ಮುಟ್ಟುವಾಸೆ, ಜೀವ ಕಾಣುವ
ಬಯಕೆ ಸೇರಿ ಆಚೆ ದಡವ...
ದಿಕ್ಕಿಲ್ಲದೆ ಬಂದಿಳಿದ ದ್ವೀಪವ
ತೊರೆದು ತ್ವರನೆ ಸೇರುವ
ಏಕಾಂತದ ನಡುಗಡ್ಡೆಯ...
ಪ್ರಯತ್ನದ ಕೈಬಿಚ್ಚಿ ಕೈಬಡಿದು
ನಂಬಿಕೆಯ ಉಸಿರನ್ನು ಬಿಡದಂತೆ ಹಿಡಿದು
ನೋವಿನಾಳವ ಸಹಿಸಿ ಒಮ್ಮೆ ಜಿಗಿದು
ಬಯಕೆ ದಿಕ್ಕಲ್ಲಿ ಮನಸೋಲದೆ ಚಲಿಸಿ
ಮೇಲೆ ಕಾಣದ ಆಳ ದಾಟುವ
ಸೇರಲೊಮ್ಮೆ ಆಚೆ ದಡವ
ಬಯಸಿ ಬಂದೆ ಬಯಕೆ
ಕೈಹಿಡಿದು ಒಂಟಿಯಾಗಿ ಎಕಾಂತಕೆ
ಕಂಡು ಕೊಂಡೆ ಕಾಣಬೇಕಿದ್ದ
ನನ್ನ ನಾ ಜಂಟಿಯಾಗಿ ಇನ್ನೂ ಹತ್ತಿರಕೆ...
ಅರಿವಿಲ್ಲದೆ ಅರಿವು ಎಳೆದೊಯ್ಯುತಿದೆ
ನೀರಿಗೆ ನಿಲುಕದ ತನ್ನ ಎತ್ತರಕೆ...
ರುದ್ರಪ್ಪ...
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ