ಶನಿವಾರ, ನವೆಂಬರ್ 12, 2011

ಮನಶಾಂತಿ



ತುತ್ತ ತುದಿಯಲ್ಲಿ ಬಂದು ನಿಂತ ಕನಸುಗಳು, 
ಮನಶಾಂತಿಯ ಮೆಟ್ಟಿಲಿಲ್ಲದೆ ಜಾರಿ ಕೆಳಗೆ ಬೀಳುತಿವೆ...
ಜಾರುವ ಜಾರಿಕೆಯ ಹಿಡಿದು ಹತ್ತಲು,
ಸುತ್ತಲು ಕವಿದ ಕತ್ತಲು ಕೈ ಕೊಡವುತಿದೆ...

ಕೈಬೆರಳುಗಳ ನಡುವೆ ತಿರುಗಿ ಕೊನೆಯ ತುತ್ತೊಂದು
ತಟ್ಟೆ ಮೂಲೆಯ ಹುಡುಕುತಿದೆ ಮೊಗದಲ್ಲಿಯ ತಾತ್ಸಾರವ ಕಂಡು...
ಬೆನ್ನಟ್ಟಿ ಬೆರಳುಗಳು ಹಿಡಿದೆತ್ತಿ ಕೇಳಿದಾಗ ಜಾರಿಕೊಂಡಿತು
ನೆವ ಹೂಡಿ ಕೈ ಮಾಡಿ ಹೊಟ್ಟೆ ಹೃದಯ ಭಾರವಾಯಿತೆಂದು...

ನೀರಡಿಸಿ ನುಂಗುತಿದ್ದ ಬೊಗಸೆ ನೀರಿನ ಕೊನೆಯ ಗುಟುಕೊಂದು
ಗಂಟಿಲಿಳಿಯದೆ ಮರಳಿ ಬರುತಿದೆ ಅಶಾಂತಿಯ ಕಣ್ಣಿಂದ ಕಂಡು...
ತಡೆದು ಏಕೆ ಮರಳಿದೆ ಎಂದಾಗ ಹೇಳಿತು, ಓಡುತಿಹೆ
ಒಳಗಿನ ಬಿಸಿಗೆ ಎಲ್ಲಿ ಸುಟ್ಟು ಆವಿಯಾಗುವೆ ಅಂತ ಹೆದರಿಕೊಂಡು...

ನಿದ್ದೆಯುತ್ತುಂಗದ ಕೊನೆಯ ಕನಸೊಂದು
ತಡಬಡಿಸಿ ಗಾಬರಿಯಲಿ ಎಬ್ಬಿಸುತಿದೆ ನಿದ್ದೆಕೆಡಿಸಿ...
ಹಾರಿ ಹೋಗುತಿದ್ದ ಕನಸೊಂದು ನೆನಪಿಂದ ಹಿಡಿದು ಕೇಳಿದಾಗ ಹೇಳಿತು
ಒಳಗೆ ಅಶಾಂತಿಯೊಂದು ಕನಸೆಲ್ಲವ ಹಿಡಿದು ನುಂಗುತಿದೆ ನುಚ್ಚು ನೂರಾಗಿಸಿ...

ಬೆರಳುಗಳೆರಡರ ನಡುವೆ ತುದಿಯಲಿ ಕೊನೆಯುಸಿರ ಧೂಮವೊಂದು
ಅಲ್ಲಿ ಇಲ್ಲಿ ಬಡಿದು ಕೆಮ್ಮಿಸಿ, ರಭಸದಲಿ ಹೊರಬರುತಿದೆ
ಹೊರಬಂದ ಹೊಗೆಯ ಹುಬ್ಬೇರಿಸಿ ಕೇಳಿದಾಗ ಹೇಳಿತು
ಒಳತುಂಬಿದ ಅಶಾಂತಿಯ ಹೊಗೆಯಲ್ಲಿ ಕಳೆದು ಹೋಗುವೆನೆಂಬ ಭಯವಾಗುತಿದೆ..

ಕೊನೆಯ ಸಾಲಿಗೆ ಬಂದು ನಿಂತ ಕವಿತೆಯೊಂದು
ಸೊಂಟದ ಮೇಲೆ ಕೈಯಿಟ್ಟು ನಿಂತಿದೆ ಭಾವಪೂರ್ಣವಿಲ್ಲವೆಂದು...
ಕಷ್ಟಬಿದ್ದೆ, ದುಡಿವ ಪದಗಳ ಸಾಲಿಗೆ ಎಳೆದು ತರಲು
ಮುಖವೂದಿಸಿ ಕುಳಿತಿಹವು ಸಿಗುವ ಮಾನದ ಸಂಬಳ ಸಾಲದೆಂದು...

ರುದ್ರಪ್ಪ...





ಕಾಮೆಂಟ್‌ಗಳಿಲ್ಲ: