ಗುರುವಾರ, ನವೆಂಬರ್ 24, 2011

ಕಂಡೂ ಕಾಣದಿರುವ ಹೊಟ್ಟೆಗಳು


ನಂಟು ಮರೆತ ಬಣ್ಣ ಬಣ್ಣದ ಹೊಟ್ಟೆಗಳ ಹಿಂದೆ
ನಂಟ ಜನಿಸಿ ನೋವ
ಹೊತ್ತು ಸತ್ತು ಹೆತ್ತ ಹೊಟ್ಟೆಗಳು...

ಹೊರ ಬಿದ್ದ ಹೊಟ್ಟೆಗಳ ಹಿಂದೆ
ಮರೆಯ ಹೊರೆಯ ಹೊರೆಯುವ
ಅದರಿ ಅವಿತ ಜೀತದ ಹೊಟ್ಟೆಗಳು...

ಬವಣೆಯಿಲ್ಲದ ಬದುಕು ಬತ್ತದ ಹೊಟ್ಟೆಗಳ ಹಿಂದೆ
ಒಪ್ಪೊತ್ತಿನ ಗಂಜಿಯ ಕಷ್ಟ
ಬೆನ್ನಿಗಂಟಿ ಬೆವರಿದ ಹೊಟ್ಟೆಗಳು...

ಹತ್ತಿ, ರೇಷ್ಮೆಯ ಹೊಟ್ಟೆಗಳ ಹಿಂದೆ
ಮಾನಕೆ ಗೇಣು ಬಟ್ಟೆ ಬೇಡುವ
ಬಾಗಿ ಬೆಳೆಯುವ ಬೆತ್ತಲೆ ಹೊಟ್ಟೆಗಳು...

ಮಾತಾಡಿ ನುಣ್ಣಗೆ ಜಾರುವ ಹೊಟ್ಟೆಗಳ ಹಿಂದೆ
ಮಾತಿನ ನಂಬಿಕೆಗೆ ಜೋತಾಡಿ
ಮಾತು ಹೊರಬರದೆ ಹೆಣಗುವ ಹೊಟ್ಟೆಗಳು...

ಕುಣಿಸುವ ಮಣಿಸುವ ಹೊಟ್ಟೆಗಳ ಹಿಂದೆ
ಇನ್ನಿಲ್ಲದಂತೆ ತಿಂದು ಮೌಲ್ಯವ
ಕುಣಿಯುವ ಕುಸಿಯುವ ಹೊಟ್ಟೆಗಳು...

ಕೊಂಡು ಉಸಿರಾಡುವ ಹೊಟ್ಟೆಗಳ ಹಿಂದೆ
ಉಸಿರಿಲ್ಲದೆ ಕೊಸರಾಡಿ
ಕೊಳ್ಳಲಾಗದೆ ಕೊನೆಯುಸಿರೆಳೆಯುವ ಹೊಟ್ಟೆಗಳು...

ಕೈತುತ್ತು ಸವರಿ ಸವಿಯುವ ಹೊಟ್ಟೆಗಳ ಹಿಂದೆ
ಸವಿಯದೆ ಹಳಿವ ಉಳಿವ
ಅನ್ನ ತಿಂದು ಅಸುನೀಗುವ ಸಣ್ಣ ಸಣ್ಣ ಹೊಟ್ಟೆಗಳು...

ಮರಗುವ ಕರಗುವ ಮೋಸದ ಹೊಟ್ಟೆಗಳ ಹಿಂದೆ
ನಂಬಿ ಮೋಸಹೋಗುವ
ನಲುಗುವ ನರಳುವ ಹೊಟ್ಟೆಗಳು...

ತಟ್ಟೆಯಲಿ ತೇಲಿ ಮೇಲಾಡುವ ಹೊಟ್ಟೆಗಳ ಹಿಂದೆ
ಬಿಸಾಕಿದ ಹಸಿರೆಲೆಯ ಹುಡುಕಿ
ಕೈಬೊಗಸೆಯಲೆ ಮುಳುಗೇಳುವ ಹೊಟ್ಟೆಗಳು...

ಕಲ್ಲು ಜೊಲ್ಲು ಹೊಟ್ಟೆಗಳ ಹಿಂದೆ
ಕೈಸಿಗದೆ ಕರಗುವ
ಕಮರುವ ಕನಸಿನ ಹೊಟ್ಟೆಗಳು...

ಮುಂದುಳಿಯುವ ಮುಂದಾಳು ಹೊಟ್ಟೆಗಳ ಹಿಂದೆ
ಕೈಕೊಡವಿ ಕೈಬಿಟ್ಟ ಮೇಲೆ ಬಿದ್ದು
ಪೆಟ್ಟು ತಿನ್ನುವ ಹಿಂದುಳಿಯುವ ಮಂದ ಹೊಟ್ಟೆಗಳು

ಕಟ್ಟೆ ಕಟ್ಟಿ ಕಸಿದಿಟ್ಟ ಒಡೆಯ ಹೊಟ್ಟೆಗಳ ಹಿಂದೆ
ಹಕ್ಕ ಕೈಚಾಚಲು ಹೆದರಿ
ಒಡೆಯ ಕೈ ಕಟ್ಟಿದ ಹೊಟ್ಟೆಗಳು...

ಮೊಸರನು ಹೀರಿ ಬಿರಿಯುವ ಹೊಟ್ಟೆಗಳ ಹಿಂದೆ
ಕೈಕೆಸರನು ನೆಚ್ಚಿ ಕೂತ
ಹನಿ ನೀರಿಲ್ಲದೆ ಬಿರುಕು ಬಿಟ್ಟ ಹೊಟ್ಟೆಗಳು...

ಝಣ ಝಣಿಸುವ ಕಿವುಡು ಹೊಟ್ಟೆಗಳ ಹಿಂದೆ
ಕಾಲಡಿ ಬಿದ್ದರೂ ಕೆಳಗೆ ಬಿದ್ದ
ಕುರುಡು ಕಾಂಚಾನಕೆ ಕಿವಿ ನಿಮಿರುವ ಹೊಟ್ಟೆಗಳು...

ಅಂಟಿರದ ಒಂಟಿ ಕ್ರೂರ ಹೊಟ್ಟೆಗಳ ಹಿಂದೆ
ಸುಲುಗೆಯಲಿ ಬದುಕ ಕಟ್ಟುವ
ಅಂಜುಬುರುಕ ಜಂಟಿ ಹೊಟ್ಟೆಗಳು...

ಹುಟ್ಟು ಒಂದಿದ್ದರೂ ಹುಟ್ಟಿದಾಗ
ಹೊಟ್ಟೆಪಾಡಿನ ಪಟ್ಟು ಕಾಯುವ, ಬೇರ್ಪಡಿಸುವ,
ಸಾವಿನಲ್ಲಿ ಹೂತ ನಂತರ ಭೂತದೊಟ್ಟೆಗಳ..

ಅರಿವಾಯ್ತು ಹೃದಯ ಕೊಟ್ಟ ದೇವ, ಹೊಟ್ಟೆ ಕೊಟ್ಟು
ಬೇರೆ ಜಾಗದಲಿಟ್ಟು, ಬೇರೆ ಊಟ ಕೊಟ್ಟು,
ಬೇರ್ಪಡಿಸಿ, ಜೀವ ಹರಿಸುವ ಮೇಲಷ್ಟು ಕೆಳಗಷ್ಟು,...

ದೇವ ಕೊಟ್ಟ ಹೊಟ್ಟೆಯೊಂದೆ ಆದರೂ ಹಿಂದೆ
ಹೊಟ್ಟೆಗಳೊಡೆದು ನಂದು ನಿಂದು ಎಂದು,
ಏಕೆ ಬೇರೆ ಹೊರುವ ಈ ಜೀವಿತದ ಭಾರವ?

ರುದ್ರಪ್ಪ...

ಕಾಮೆಂಟ್‌ಗಳಿಲ್ಲ: