ಗುಜರಿ ಅಂಗಡಿ ಗೋಣಿ ಚೀಲ
ಮನೆಯ ಗುಜರಿಯೊಂದು
ಗೋಣಿ ಚೀಲ ಹೊಕ್ಕು
ಇಣುಕುತಿದೆ ತರ್ಕ ಕಿಂಡಿಯಲಿ ...
ಹಳೆ ಪುಸ್ತಕ ಹಾಳೆಗಳ
ಒಟ್ಟಿದ ಹೆಣಗಳ ಹರಿಯುವ ರಕ್ತ ಹೆಪ್ಪುಗಟ್ಟುತಿದೆ
ಕಟ್ಟು ಬಿದ್ದು ಕಟ್ಟಿದ ಕಸುಬಿನ ಸೆಣಬಿನಲಿ...
ಇಷ್ಟ ಪಟ್ಟು ಕಷ್ಟ ಬಿದ್ದ
ಕನಸಿನ ಪುಸ್ತಕಗಳು ಕೊನೆಯವಕಾಶ
ಕೊಟ್ಟು ಕೈಚಾಚುತಿವೆ ತರ್ಕದ ತೂತಿನಲಿ....
ಗೊತ್ತಿಲ್ಲ!! ಬೇರೆ ಯಾರಾದರು
ಬೆಲೆ ಕೊಟ್ಟರೆ ಮಾರುವ ಮನಸಿದೆಯೇನೋ
ಕಟ್ಟಿ ಎಲ್ಲ ಒಟ್ಟಿಗೆ ಗುತ್ತಿಗೆಯಲಿ....
ಒಳ ಮಾತು, ಒಂದು ಕಡೆ ನಾ ಕಡೆಗಣಿಸಿದ
ತರ್ಕವಿದ್ದರೆ ಮತ್ತೊಂದೆಡೆ ನನ್ನ
ಕೂಸಿನ ಕುತ್ತಿಗೆಗೆ ನಾ ಹೇಗೆ ಸೆಣಬೆಳೆಯಲಿ?
ಅರ್ಥವಾಗದು!! ಕಷ್ಟ ವರ್ಷಗಳ ಹಾಜರಿ ನೀಡಿ
ಪಡೆಯಲು ಸಾಲಲ್ಲಿ ನಿಂತ ನಾ ಇಂದು
ಅಭಿಮಾನವ ಹೇಗೆ ಕಟ್ಟಿ ಬಿಟ್ಟೆ ಗುಜರಿಯಲಿ?..
ನಾನೇ ಕೊಡದ ಬೆಲೆಯ
ಗುಜರಿಯವ ಏನು ಕೊಟ್ಟಾನು
ಎಷ್ಟು ಕೊಂಡಾನು ಕಂತೆಯ ಕಟ್ಟಿನಲಿ?...
ನೋವು ಮುತ್ತಿದೆ, ತಮ್ಮ ತಂಗಿ, ಮಕ್ಕಳೆಲ್ಲ
ಮುಟ್ಟುವದಿಲ್ಲ ಗುಜರಿಯ ನನ್ನಿಂದ ಕಲಿತ ಕಲಿಕೆಯಲಿ,
ತಲೆಮಾರಿಗೆ ಪದೆ ಪದೇ ಬದಲಾಗುವ ಪಠ್ಯ ಕ್ರಮದಲಿ...
ಕೊನೆಗೆ ಮನೆ ಬಿಟ್ಟು ಹೋಗುವಾಗ
ಯಾರು ಕೊಳ್ಳಲಾರದ ಗುಜರಿಯ ಹೊತ್ತು
ನಾನೇ ಸಾಗಬೇಕು ಭಾರದ ನೋವಿನಲಿ, ನೆನಪಿರಲಿ...!!!
ಎಣ್ಣೆ ದೀಪದ ಜೊತೆ ಬೆಳಕು ಆರುತಿದೆ
ಎಲ್ಲೋ ನನ್ನ ನಾ ಕತ್ತಲೆಯಲಿ ಹುಡುಕಲು
ಹಚ್ಚಿದ ಇಷ್ಟದ ದೀವಿಗೆಯಲಿ...
ಕೊನೆಯ ಗಳಿಗೆ ತಿಳಿಯದಾಗಿದೆ
ವಂಶ ದಾರಿಗೆ ಅಸುನೀಗುವ
ಯಾವ ಬೆಳಕು ಯಾರಿಗೆ ಹೇಗೆ ಬಿಟ್ಟು ಹೋಗಲಿ....!!
ನಮ್ಮಲ್ಲಿ ಎಷ್ಟೋ ಜನ ಇವತ್ತು ಕಲಿತದ್ದು ಒಂದಾದರೆ ಕೆಲಸ ಮಾಡೋದು ಇನ್ನೊಂದು. ಒಂದಕ್ಕೊಂದು ಸಂಭಂಧವಿರುವದಿಲ್ಲ. ಇದ್ದರು ಅದು ನಮ್ಮಿಷ್ಟವಾಗಿರುವದಿಲ್ಲ. ಕಾರಣ ಹಣದ ಸೆಳೆತವಾಗಬಹುದು, ವ್ಯಾಮೋಹವಿರಬಹುದು ಅಥವಾ ಕೀಳರಿಮೆಯಿರಬಹುದು. ಅಂತಹ ಒಂದು ಆಯ್ಕೆಯ ಮನದಾಳದ ಮಾತನ್ನು ಸೆರೆಹಿಡಿಯುವ ಪ್ರಯತ್ನ.
ರುದ್ರಪ್ಪ...
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ