ಬುಧವಾರ, ಡಿಸೆಂಬರ್ 14, 2011

ನಿಶ್ಯಬ್ದ ಪಯಣ ...

ನಿಶ್ಯಬ್ದ ಪಯಣ ...


ಹೊರಟ ರೈಲಿನಲ್ಲಿ
ತಳ್ಳುವ ನೂಕುವ
ಜನಜಂಗುಳಿಯ ನಡುವೆ
ಹೋರಾಟ ಮಾಡಿ
ಯಾವ ಡಬ್ಬಿಯೆಂದು ನೋಡದೆ
ಎಲ್ಲರನು ದಬ್ಬಿ ಹತ್ತಿಹೆ ,..

ನಿಲ್ದಾಣ ಬೇಡದ
ನಿರಂತರ ಪಯಣಿಗ
ನಿಲ್ಲದ ಪಯಣದ
ಅತ್ತಿತ್ತ ನೋಡದೆ
ಹವ್ಯಾಸದ ಗಂಟು ಹೊತ್ತು
ಕಾಯ್ದಿರಿಸದೆ ಡಬ್ಬಿಯೇರಿಹೆ...

ಇದ್ದ ಡಬ್ಬಿಯೊಳಗೆ,
ಇರುವಷ್ಟರಲ್ಲಿ

ನೋಡಿ ಆನಂದಿಸಿ,
ಅನುಭವಿಸಬೇಡಿ!
ಉಸಿರಾಡಿದಿರೋ ಜೋಕೆ?
ಎನ್ನುವ ಫಲಕವೊಂದಿದೆಯೇಕೆ?

ಅಭೆಧ್ಯ ನಿಷ್ಟುರ ನಿಶ್ಯಬ್ದ,
ಚುಟುಕು ಪೋಲಿಗಳಿಗೆ
ಸಂಬದ್ದ ಪಾಠ ಹೇಗೆ ಹೇಳೀತು?
ಈ ರೌರವ ಮೌನ,
ನಿರಂತರ ಮಾತಾಡುವ ಜನಕೆ
ಸಮಾಧಾನ ಹೇಗೆ ಹೇಳೀತು?

ಕಂಡ ಹಸಿರನ್ನೆಲ್ಲ
ಅದು ಹುಲ್ಲು
ಅದು ಪಾಚಿ
ಎನ್ನುವ ಮನಸ್ಸು
ಬಣ್ಣವೇ ನೀ ಮಾತಾಡಬೇಡ

ಎನ್ನುವ ಕೆಂಭೂತದ ಮಾತು ಹೇಗೆ ಕೇಳೀತು?

ಇಳಿಯಲು ಸರಪಳಿ ಎಳೆದು
ಇಳಿಯಬಾರದ ಜಾಗದಲಿ ಇಳಿದರೆ
ನಿಲ್ಲಲಾರದ ಜಾಗದಲಿ

ಇಳಿದ ಡಬ್ಬಿಯ ಎಳೆಯಲು,
ಜೊತೆಗೆ ನಿಂತ ಡಬ್ಬಿಗಳೆಷ್ಟು?
ಕೂಡಿಸುವ ಕೊಂಡಿಗಳೆಷ್ಟು?

ಹೊತ್ತೊಯ್ಯುವ ಹಳಿಗಳೆಷ್ಟು ?
ಮೇಲುರುಳುವ ಗಾಲಿಗಳೆಷ್ಟು?
ಜಗ್ಗುವ ಇಂಜೀನುಗಳೆಷ್ಟು ಬೇಕು?
ಪ್ರಯಾಣ ಕಷ್ಟವೆಂದು
ಇಳಿಯುವ ಮುನ್ನ ಹೃದಯಿಗಳಾಗಿ
ಬಿಟ್ಟಿಳಿಯುವ ಕಷ್ಟಗಳ ಬಗ್ಗೆ ಯೋಚಿಸಬೇಕು...


ರುದ್ರಪ್ಪ...

ಕಾಮೆಂಟ್‌ಗಳಿಲ್ಲ: