ಶನಿವಾರ, ಡಿಸೆಂಬರ್ 10, 2011

ದೂರ ಕಾಣದಂತೆ...



ದೂರ ಕಾಣದಂತೆ...


ಕಾಣುವದ ನೋಡದಂತೆ
ಎಲ್ಲೋ ನೋಡಬಯಸುವ
ಕಂಗಳು ಶೂನ್ಯ ಸೇರಿವೆ
ಇನ್ನೇನು ನೋಡದಂತೆ...


ಪದೇ ಪದೇ ಜಾರುವ ಹನಿಗಳ 
ಒರೆಸುವ ಮುಂಗೈ ಕೂಡ
ದೂರ ಅಲುಗದೆ ನಿಂತಿದೆ
ಇನ್ನೆಂದು ಮೇಲೇಳದಂತೆ...


ಆರ್ದ್ರ ಹೃದಯದ ಒಳಗೆಲ್ಲ
ಬಿಸಿಯಿಲ್ಲದೆ ಹೆಪ್ಪುಗಟ್ಟಿದೆ
ಮಾತಾಡಿಸುವ ಮೌನ ಹರಿಯದೆ
ನಿನ್ನಂತೆ...!!!


ಬದುಕುವಾಸೆ ಸರಾಗವಾಗಿ
ಬಡಿತವಿಲ್ಲದೆ ಹಿಡಿತವಿಲ್ಲದೆ
ಎಲ್ಲ ಕೊಡವಿ ಕುಸಿಯುತಿದೆ    
ಇನ್ನೇಳದಂತೆ... 


ಈ ಜೀವ ನಿನ್ನ ಎದುರಿಗೆ
ನಿಲುಕದ ಉಸಿರಿಗೂ ನಿಲುಕದೆ
ಕೊಸರಾಡಿ ಕೊನೆಯುಸಿರೆಳೆದಿದೆ
ಇನ್ನಿಲ್ಲದಂತೆ...


ಅತ್ತ ಇತ್ತ ಹಾಯದ ಉಸಿರನು
ಎರಡು ಬೆರಳಿಡಿದು ಕೆಣಕದಿರು
ಸುಳಿವ ನಿನ್ನ ಹತ್ತಿರಕೆ
ಉಸಿರು ಮತ್ತೆ ಮರಳದಂತೆ...


ಕಾಣದಂತೆ ಮಾಯವಾಗು
ಹೆಣವ ದೂರ ದೂಡಿ
ಅಪ್ಪಿ ತಪ್ಪಿ ನಿನ್ನ ದೂರ ನೋಟಕೆ
ಈ ಜೀವ ಇನ್ನೆಂದು ಏಳದಂತೆ...


ರುದ್ರಪ್ಪ... 

ಕಾಮೆಂಟ್‌ಗಳಿಲ್ಲ: