ಭಾನುವಾರ, ಡಿಸೆಂಬರ್ 11, 2011

30 ನಿಮಿಷಗಳ ಸರ್ಕಸ್ಸು,


30  ನಿಮಿಷಗಳ ಸರ್ಕಸ್ಸು,

ಗೆದ್ದ ಸರದಾರನೊಬ್ಬ  
ಕೈಗಡಿಯಾರದ ಕೈಗೊಂಬೆ
ಯಾಗಿ ಚಿಂತೆ ಗಳಿಗೆಯಲಿ 
ಚಿಂತೆಗಳಿಗೆ ಉಣ್ಣುವ ಹಬ್ಬ ಆಗಿದ್ದ ...

ನೋವಾದಷ್ಟೂ ಒತ್ತಿ 
ಮೂರು ಮುಳ್ಳುಗಳ ಹಿಡಿದು
ತುಡಿತದ ಕುಣಿತಕೆ ಬಾರದ 
ನಿರ್ದೇಶಕಿಗೆ ಎದುರು ನೋಡುತಿದ್ದ... 

ದಪ್ಪ ಚರ್ಮದ ಒಳಗೆ 
ಮೆತ್ತನೆಯ ಜಾಗ ಹುಡುಕಿ  
ತಿವಿಯುವ ಚುಚ್ಚುವ ಆ ಮೂರು
ಮುಳ್ಳುಗಳ ಪದೆ ಪದೆ ನೋಡುತಿದ್ದ... 

ಹಿಡಿತ ಜಾರಿ ತಪ್ಪಿಸಿದ ನುಣ್ಣನೆಯ 
ಮುಳ್ಳುಗಳು ಆಳಕೆ ಚುಚ್ಚಿ 
ವಿಷಾದ ವಿಷವ ಬಿಟ್ಟು ವೇದನೆಗೂ 
ಅವಕಾಶ ಕೊಡದೆ ಓಡುವದ ನೋಡುತಿದ್ದ... 

ದೂರದೂರಿನ ಗುಬ್ಬಿಯಂತೆ 
ಎದೆಯೆಲ್ಲ ಆವರಿಸುತಿಹ ಕತ್ತಲಿಗೆ 
ಮಾತಾಡಿಸದೇ ಮರಳುವ ಬೆಳಕಿಗೆ 
ಕೆಟ್ಟ ಕಣ್ಬಿಟ್ಟು ಸಿಟ್ಟು ಮಾಡುತಿದ್ದ... 

ಸರಿ ಸಮಯಕೆ ಕೊಬ್ಬನುಂಡು   
ಹೊಂಚಿದ ಸೇಡಿಗೆ ಒಳಗೆಲ್ಲ ಓಡಾಡುವ  
ಅತಿಯಾಗಿ ಪಟ್ಟ ಆಸೆಗಳ
ಒಂದೊಂದೆ ಹಿಡಿದು ನ್ಯಾಯ ಕೇಳುತಿದ್ದ... 

ಕೈಗಡಿಯಾರದ ಸರದಾರ
ಸಮಯಕೆ ಕಟ್ಟದೆ ಮೂಗುದಾರ ಬರಿ 
ಕೈಗೆ ಕಟ್ಟಿ ನಿಲ್ಲಲು ಎಳೆಯುತ 
ಕೈ ಬಿಡದಿರಲು ಕಣ್ಸನ್ನೆಯಲಿ ಬೇಡುತಿದ್ದ... 

ಬಂದವರಲ್ಲಿ ಅವಳೇ 
ಬರಬಾರದಿತ್ತೆ ಹೋಗಲಿ 
ಮುಂದೆ ಬರುವವರಲ್ಲಿ ಅವಳೇ 
ಮುಂದಾಗಿ ಬರಬಾರದೇ ಎಂದೆಲ್ಲ ಬೇಡಿದ್ದ...

ಬಂದವರೆಲ್ಲ ತನ್ನವರೇನೋ ಎಂಬ
ಕುತೂಹಲ ನಿರಾಸೆಯ ಅವಳಿಗಳ 
ಸರದಿಯಾಗಿ ಪ್ರಸವಗೊಂಡು 
ಎಣಿಸದಷ್ಟು ಬಾರಿ ನೋವ ಚೀತ್ಕಾರ ಹಿಡಿದಿಟ್ಟಿದ್ದ...  

ಸಹನೆಯ ಕೊನೆಯ ಗಳಿಗೆ 
ಬಾರದಿದ್ದಾಗ ಕಟ್ಟೆಯೊದ್ದು   
ಫೋನಾಯಿಸಿ "ಎಲ್ಲಿದೀಯ?" ಎಂದಾಗ
ಅವಳಮ್ಮ "ಆಸ್ಪತ್ರೆಯಲಿ" ಅಂದಾಗ ಒಡೆದು ನೂರಾಗಿದ್ದ...

ನೋವಿನಂಗಡಿಯ ಮುಂದೆ ನಿಂತು 
ಕೊಟ್ಟ ಸಹನೆಯ ಬೆಲೆ 
ಹೆಚ್ಚಾಯಿತೋ! ಕಡಿಮೆಯಾಯಿತೋ ?
ಕೊಳ್ಳಲು ಬಂದು ಕಳೆದು ಕೊಳ್ಳುವಂತಾಯಿತಲ್ಲ ಎಂದು ಕೊರಗುತಿದ್ದ...

ರುದ್ರಪ್ಪ... 



ಕಾಮೆಂಟ್‌ಗಳಿಲ್ಲ: