ಓಡತಿತ್ತ ಹಾರತಿತ್ತ,
ಇಲ್ಲಿ ಪ್ರ-ಸಾರ ಬರಿ ಕಪ್ಪು...
ಕರಿ ಕವರ್ ಕರೆ ಹೊಳಪಿನ
ಹಾರ್ಗುದುರಿ ಹಂಗ ಗಾಳಿಗೊಮ್ಮೆ
ರೆಕ್ಕಿ ಬಡದು ಒಂದ ಹೆಜ್ಜಿಗೆ
ಮ್ಯಾಲ ಏರಿ ಹಾರಿ ಓಡತಿತ್ತ ಹಾರತಿತ್ತ...
ಏನ್ ಕುಡದ್ರು ಏನ್ ತಿಂದ್ರು
ಅಂತ ಯಾರಿಗೂ ಗೊತ್ತಾಗದಂಗ
ಕೈಬೆರಳಾಗ ಜೋತು ಬಿದ್ದು
ಒಳಗಿಂದು ಹೊರ ಬೀಳದಂಗ ಗುಟ್ಟ ಕಾಪಾಡಿತ್ತ
ಒಳಗಿನ ಮರ್ಮ ಯಾವ
ಬಣ್ಣ ಎಷ್ಟೈತಣ್ಣ ಅಂತ ತೋರದ
ಹೊರಗೊಂದ ಬಣ್ಣ ಬೀರಿ
ಕಪ್ಪ ಬೆಕ್ಕಿನಾಂಗ ಸಂಚು ಮಾಡಿ ಗುಟ್ಟ ನುಂಗಿತ್ತ
ಮೂಕ ಜೀವಿಯ ಹೆಣಾ ಹೊತ್ತು
ಸುಟ್ಟು ಹೊಟ್ಟ್ಯಾಗ ಹಾಕಿ
ಕೈ ಬಳ್ಳಾಗ ಜೀಕಾ ಹೊಡದು
ಕಸದ ಸಮುದ್ರದಾಗ ಅಸ್ತಿ ಬಿಟ್ಟಂಗ ತೇಲಿಬಿತ್ತ...
ಕಪ್ಪು ಬಣ್ಣದ ದೆವ್ವ ಹೊತ್ಕೊಂಡ
ಹೆಂಡಾ ಹೊಟ್ಟ್ಯಾಗ ಇಟ್ಟು
ಹೆಂಡತಿ ಮಕ್ಕಳ ಜೀವನ ಬೆಂಕ್ಯಾಗಿಟ್ಟು
ಕಸದಾಗ ಜಾರಿ ಹಾರಿ ಮಜಾ ನೋಡುತಿತ್ತ
ಝಳ ಝಳ ಹರಿಯೋ ನೀರಿಗೆ ಬಿದ್ದು
ಚಳ ಚಳ ಸಪ್ಪಳ ಮಾಡ್ಕೊತ
ಹೊಟ್ಟಿ ಉಬ್ಬಿ ಉಸಿರುಗಟ್ಟಿದ್ರು
ಸಾಯದ ತೇಲಿ ಹೆಣಾ ಆಗದಂಗ ಈಜತಿತ್ತ...
ಹುಚ್ಚ ಹಿಡದ ಕರೆ ಮುಶ್ಯಾನಂಗ
ಗಿಡ ಮನಿಮ್ಯಾಲೆ ಜೋತಾಡಿ
ಮತ್ತ ಗಾಳಿ ಜೊತಿ ಹಾರಾಡಿ ಕಸದ ಸುತ್ತ
ಕಪ್ಪ ಕಾಗಿಹಂಗ ಗರ ಗರ ಸುತ್ತತಿತ್ತ...
ಇದಕ್ಕ ಸಾವಿಲ್ಲ ಅನ್ನೋದು ಸುಳ್ಳಲ್ಲ
ಕಣ್ಣ ಮುಂದ ಹಾರಾಡೋ ಸತ್ಯಾನ
ಕಣ್ಣಿಗೆ ಕರಿ ಪಟ್ಟಿ ಕಟ್ಕೊಂಡು ಕಪ್ಪು ಪರಿಸರದಾಗ
ಬಕಪಕ್ಷಿ ಹಂಗ ಹಸಿರು ಬರೆ ಕನಸ್ನ್ಯಾಗ ಕಂಡಿತ್ತ...
ರುದ್ರಪ್ಪ...
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ