ಬುಧವಾರ, ನವೆಂಬರ್ 30, 2011

ಮನೆಯ ಬೆಳಕು

ಮನೆಯ ಬೆಳಕು

ತನ್ನಿರೈ ತಣ್ಣೀರ ಸುರಿಯೋಕೆ
ಮಧು-ಮಕ್ಕಳ ಕೂರುವ ಹಸಿ-ಮಣೆಗೆ...

ಎಣ್ಣೆ ಸುರಿಯಬೇಡಿ ಕಾಳ್ಗಿಚ್ಚಿನ ತರಹ
ತಂತಾನೇ ಹೊತ್ತಿ ಉರಿವ ವರದಕ್ಷಿಣೆಗೆ...

ಪಿಡುಗು ನಮ್ಮಿಂದಲೇ ಕೊನೆ ಕಾಣಲಿ,
ಸಾವಿಲ್ಲದ ಸಂಸಾರ ಜ್ಯೋತಿ ಚಿರವಾಗಲಿ...

ಸೇರಿ ಹಚ್ಚಿದ ಹಣತೆ, ದುರಾಸೆಯ ಕತ್ತಲಲ್ಲಿ
ಹುದುಗಿದ ಚಿರ ಬೆಳಕಿಗೆ ಜೀವ ಮರಳಿಸಲಿ...



ಒಂದು ಹಣತೆಯಿಂದ ಇನ್ನೊಂದು ಹಣತೆ
ಹೀಗೆ ಮನೆ ಮನೆಯಲ್ಲಿ ಬೆಳಕು ಜೀವ ಕಾಣಲಿ...

ರುದ್ರಪ್ಪ...

ಮಂಗಳವಾರ, ನವೆಂಬರ್ 29, 2011

ಗುಜರಿ ಅಂಗಡಿ ಗೋಣಿ ಚೀಲ



ಗುಜರಿ ಅಂಗಡಿ ಗೋಣಿ ಚೀಲ

ಮನೆಯ ಗುಜರಿಯೊಂದು
ಗೋಣಿ ಚೀಲ ಹೊಕ್ಕು
ಇಣುಕುತಿದೆ ತರ್ಕ ಕಿಂಡಿಯಲಿ ...

ಹಳೆ ಪುಸ್ತಕ ಹಾಳೆಗಳ 
ಒಟ್ಟಿದ ಹೆಣಗಳ ಹರಿಯುವ ರಕ್ತ ಹೆಪ್ಪುಗಟ್ಟುತಿದೆ   
ಕಟ್ಟು ಬಿದ್ದು ಕಟ್ಟಿದ ಕಸುಬಿನ ಸೆಣಬಿನಲಿ...

ಇಷ್ಟ ಪಟ್ಟು ಕಷ್ಟ ಬಿದ್ದ   
ಕನಸಿನ ಪುಸ್ತಕಗಳು ಕೊನೆಯವಕಾಶ 
ಕೊಟ್ಟು ಕೈಚಾಚುತಿವೆ ತರ್ಕದ ತೂತಿನಲಿ....

ಗೊತ್ತಿಲ್ಲ!! ಬೇರೆ ಯಾರಾದರು 
ಬೆಲೆ ಕೊಟ್ಟರೆ ಮಾರುವ ಮನಸಿದೆಯೇನೋ 
ಕಟ್ಟಿ ಎಲ್ಲ ಒಟ್ಟಿಗೆ ಗುತ್ತಿಗೆಯಲಿ....

ಒಳ ಮಾತು, ಒಂದು ಕಡೆ ನಾ ಕಡೆಗಣಿಸಿದ 
ತರ್ಕವಿದ್ದರೆ ಮತ್ತೊಂದೆಡೆ ನನ್ನ
ಕೂಸಿನ ಕುತ್ತಿಗೆಗೆ ನಾ ಹೇಗೆ ಸೆಣಬೆಳೆಯಲಿ?

ಅರ್ಥವಾಗದು!! ಕಷ್ಟ ವರ್ಷಗಳ ಹಾಜರಿ ನೀಡಿ
ಪಡೆಯಲು ಸಾಲಲ್ಲಿ ನಿಂತ ನಾ ಇಂದು 
ಅಭಿಮಾನವ ಹೇಗೆ ಕಟ್ಟಿ ಬಿಟ್ಟೆ ಗುಜರಿಯಲಿ?..  

ನಾನೇ ಕೊಡದ ಬೆಲೆಯ 
ಗುಜರಿಯವ ಏನು ಕೊಟ್ಟಾನು
ಎಷ್ಟು ಕೊಂಡಾನು ಕಂತೆಯ ಕಟ್ಟಿನಲಿ?...

ನೋವು ಮುತ್ತಿದೆ, ತಮ್ಮ ತಂಗಿ, ಮಕ್ಕಳೆಲ್ಲ 
ಮುಟ್ಟುವದಿಲ್ಲ ಗುಜರಿಯ ನನ್ನಿಂದ ಕಲಿತ ಕಲಿಕೆಯಲಿ, 
ತಲೆಮಾರಿಗೆ ಪದೆ ಪದೇ ಬದಲಾಗುವ ಪಠ್ಯ ಕ್ರಮದಲಿ...   

ಕೊನೆಗೆ ಮನೆ ಬಿಟ್ಟು ಹೋಗುವಾಗ 
ಯಾರು ಕೊಳ್ಳಲಾರದ ಗುಜರಿಯ ಹೊತ್ತು 
ನಾನೇ ಸಾಗಬೇಕು ಭಾರದ ನೋವಿನಲಿ, ನೆನಪಿರಲಿ...!!!

ಎಣ್ಣೆ ದೀಪದ ಜೊತೆ ಬೆಳಕು ಆರುತಿದೆ 
ಎಲ್ಲೋ ನನ್ನ ನಾ ಕತ್ತಲೆಯಲಿ ಹುಡುಕಲು
ಹಚ್ಚಿದ ಇಷ್ಟದ ದೀವಿಗೆಯಲಿ...

ಕೊನೆಯ ಗಳಿಗೆ ತಿಳಿಯದಾಗಿದೆ 
ವಂಶ ದಾರಿಗೆ ಅಸುನೀಗುವ 
ಯಾವ ಬೆಳಕು ಯಾರಿಗೆ ಹೇಗೆ ಬಿಟ್ಟು ಹೋಗಲಿ....!!

ನಮ್ಮಲ್ಲಿ ಎಷ್ಟೋ ಜನ ಇವತ್ತು ಕಲಿತದ್ದು ಒಂದಾದರೆ ಕೆಲಸ ಮಾಡೋದು ಇನ್ನೊಂದು. ಒಂದಕ್ಕೊಂದು ಸಂಭಂಧವಿರುವದಿಲ್ಲ. ಇದ್ದರು ಅದು ನಮ್ಮಿಷ್ಟವಾಗಿರುವದಿಲ್ಲ. ಕಾರಣ ಹಣದ ಸೆಳೆತವಾಗಬಹುದು, ವ್ಯಾಮೋಹವಿರಬಹುದು ಅಥವಾ ಕೀಳರಿಮೆಯಿರಬಹುದು. ಅಂತಹ ಒಂದು ಆಯ್ಕೆಯ ಮನದಾಳದ ಮಾತನ್ನು ಸೆರೆಹಿಡಿಯುವ ಪ್ರಯತ್ನ.

ರುದ್ರಪ್ಪ...

ಶುಕ್ರವಾರ, ನವೆಂಬರ್ 25, 2011

ಕಣ್ಣು ಮುಂದಿರುವ ಲಿಂಗ


ಕಳ್ಳ ಮನಸ ಕಲ್ಲಾಗಿದ್ದು ಇವತ್ತ ಎದ್ದಂಗೈತಿ ಸಿವಾ, ನನ್ನೊಳಗಿನ ಸಿವಾ ಮೆಚ್ಚ್ಯಾನು... ಕೈಹಿಡದು ಕೆಳಗಿನ ಸಾಲು ಬರಸ್ಯಾನು...ಓದಿ ಹೆಂಗೈತಿ ತಿಳಸ್ರ್ಯಲ್ಲ....

ಕಲ್ಲ ಲಿಂಗದ ಮ್ಯಾಲೆ ಕಳ್ಳ ಮನಸಿಟ್ಟರ,
ಸಾವಿರ ಸುಳ್ಳ ಲಿಂಗ ಎಂದು ಬೆಳ್ಳಗಾಗೈತಿ?

ಕೈಮುಗದ ಜೊಳ್ಳ ಜೋಡಿ ಹಸ್ತದ ಮುಂದ,
ಮಳ್ಳನಾಗೋ ಲಿಂಗವಲ್ಲೋ ಅದು ಮಂದಾ....

ಬೆಳ್ಳಿ ಗುನಗಡಿಗಿ ಒಳಗಾ ಕೊಡಿಟ್ಟಿಯೇನ ಅವನ?
ಒಳ್ಳೆ ಗುಣ ಗಡಿಗೆಯೊಳಗೆ ಸಿಕ್ಕ ಬೀಳೊ ಸಿವನ ....

ಅಂಗೈಯ್ಯಾಗ ತೊಳದು ಈಬತ್ತಿ ಬಡದೆನ್ ಮಾಡ್ತಿ ?
ಬುದ್ದಿ ಬೂದ್ಯಾಗ ಎದ್ದೇಳೋವ್ನ ಎಷ್ಟಂತ ತೊಳೀತಿ?

ಕಣ್ಮುಂದ ಹಿಡ್ಕೊಂಡು ಕಣ್ಮುಚ್ಚಿ ಅವನ್ಯಾಕ ಹುಡಕ್ತಿ?
ಕಣ್ಣ ಬಿಟ್ಟು ಒಳಗಾ ನೋಡು ಬರೆ ಅವನ್ನ ಕಾಣ್ತಿ ...

ರುದ್ರಪ್ಪ...

ಗುರುವಾರ, ನವೆಂಬರ್ 24, 2011

ಒಲವಿರಬೇಕು



ಮಾಲೀಕನ ಹಾಗೆ ಬಾಡಿಗೆ ಕೇಳದೆ ಒಲವಿರಬೇಕು
ಸರ್ಕಾರದ ಹಾಗೆ ಸುಂಕ ಕೇಳದೆ ಒಲವಿರಬೇಕು
ಗುಮಾಸ್ತನ ಹಾಗೆ ಲಂಚ ಕೇಳದೆ ಒಲವಿರಬೇಕು
ಮಧ್ಯಸ್ತನ ಹಾಗೆ ಬೆಲೆ ಕೇಳದೆ ಬಾಳುವ ಒಲವಿರಬೇಕು

ಅಮ್ಮನ ಹಾಗೆ ಕೇಳದೆ ಅರಿತು ಕೊಡುವ ಒಲವಿರಬೇಕು
ಅಪ್ಪನ ಹಾಗೆ ದಾರಿ ಕೈ ಹಿಡಿದು ನಡೆಸುವ ಒಲವಿರಬೇಕು
ಅಕ್ಕನ ಹಾಗೆ ಕಚಗುಳಿಯಿಟ್ಟು ನಗಿಸುವ ಒಲವಿರಬೇಕು
ಅಣ್ಣನ ಹಾಗೆ ರಹಸ್ಯ ಬಿಟ್ಟುಕೊಡದ ಒಲವಿರಬೇಕು

ಬಿಳಿಯ ಶುಭ್ರ ಕಮಲದಂತೆ ಕೆಸರಲ್ಲೂ ತಲೆಯೆತ್ತಿ ಬಾಳುವ ಒಲವಿರಬೇಕು
ನೇರಳೆಯಂತೆ ಚಿಕ್ಕದಾದರೂ ತಪ್ಪದೆ ಸಿಹಿ ಹಣ್ಣ ನೀಡುವ ಒಲವಿರಬೇಕು
ಹಕ್ಕಿಯಂತೆ ರೆಕ್ಕೆ ಬಿಚ್ಚಿ ಹಾರಿ ಗೂಡಿಗೆ ಮರಳುವ ಒಲವಿರಬೇಕು
ಸೂರ್ಯ ಚಂದ್ರರಂತೆ ಹಾಡಿ ಮಲಗಿಸುವ ಎಬ್ಬಿಸುವ ಒಲವಿರಬೇಕು

ಸಾಕಲ್ಲವೇ ಇಷ್ಟು ? ಬಾಳಲ್ಲಿ ಬದುಕಲು ಇನ್ನೇನು ಬೇಕು?

ರುದ್ರಪ್ಪ...

ಕಂಡೂ ಕಾಣದಿರುವ ಹೊಟ್ಟೆಗಳು


ನಂಟು ಮರೆತ ಬಣ್ಣ ಬಣ್ಣದ ಹೊಟ್ಟೆಗಳ ಹಿಂದೆ
ನಂಟ ಜನಿಸಿ ನೋವ
ಹೊತ್ತು ಸತ್ತು ಹೆತ್ತ ಹೊಟ್ಟೆಗಳು...

ಹೊರ ಬಿದ್ದ ಹೊಟ್ಟೆಗಳ ಹಿಂದೆ
ಮರೆಯ ಹೊರೆಯ ಹೊರೆಯುವ
ಅದರಿ ಅವಿತ ಜೀತದ ಹೊಟ್ಟೆಗಳು...

ಬವಣೆಯಿಲ್ಲದ ಬದುಕು ಬತ್ತದ ಹೊಟ್ಟೆಗಳ ಹಿಂದೆ
ಒಪ್ಪೊತ್ತಿನ ಗಂಜಿಯ ಕಷ್ಟ
ಬೆನ್ನಿಗಂಟಿ ಬೆವರಿದ ಹೊಟ್ಟೆಗಳು...

ಹತ್ತಿ, ರೇಷ್ಮೆಯ ಹೊಟ್ಟೆಗಳ ಹಿಂದೆ
ಮಾನಕೆ ಗೇಣು ಬಟ್ಟೆ ಬೇಡುವ
ಬಾಗಿ ಬೆಳೆಯುವ ಬೆತ್ತಲೆ ಹೊಟ್ಟೆಗಳು...

ಮಾತಾಡಿ ನುಣ್ಣಗೆ ಜಾರುವ ಹೊಟ್ಟೆಗಳ ಹಿಂದೆ
ಮಾತಿನ ನಂಬಿಕೆಗೆ ಜೋತಾಡಿ
ಮಾತು ಹೊರಬರದೆ ಹೆಣಗುವ ಹೊಟ್ಟೆಗಳು...

ಕುಣಿಸುವ ಮಣಿಸುವ ಹೊಟ್ಟೆಗಳ ಹಿಂದೆ
ಇನ್ನಿಲ್ಲದಂತೆ ತಿಂದು ಮೌಲ್ಯವ
ಕುಣಿಯುವ ಕುಸಿಯುವ ಹೊಟ್ಟೆಗಳು...

ಕೊಂಡು ಉಸಿರಾಡುವ ಹೊಟ್ಟೆಗಳ ಹಿಂದೆ
ಉಸಿರಿಲ್ಲದೆ ಕೊಸರಾಡಿ
ಕೊಳ್ಳಲಾಗದೆ ಕೊನೆಯುಸಿರೆಳೆಯುವ ಹೊಟ್ಟೆಗಳು...

ಕೈತುತ್ತು ಸವರಿ ಸವಿಯುವ ಹೊಟ್ಟೆಗಳ ಹಿಂದೆ
ಸವಿಯದೆ ಹಳಿವ ಉಳಿವ
ಅನ್ನ ತಿಂದು ಅಸುನೀಗುವ ಸಣ್ಣ ಸಣ್ಣ ಹೊಟ್ಟೆಗಳು...

ಮರಗುವ ಕರಗುವ ಮೋಸದ ಹೊಟ್ಟೆಗಳ ಹಿಂದೆ
ನಂಬಿ ಮೋಸಹೋಗುವ
ನಲುಗುವ ನರಳುವ ಹೊಟ್ಟೆಗಳು...

ತಟ್ಟೆಯಲಿ ತೇಲಿ ಮೇಲಾಡುವ ಹೊಟ್ಟೆಗಳ ಹಿಂದೆ
ಬಿಸಾಕಿದ ಹಸಿರೆಲೆಯ ಹುಡುಕಿ
ಕೈಬೊಗಸೆಯಲೆ ಮುಳುಗೇಳುವ ಹೊಟ್ಟೆಗಳು...

ಕಲ್ಲು ಜೊಲ್ಲು ಹೊಟ್ಟೆಗಳ ಹಿಂದೆ
ಕೈಸಿಗದೆ ಕರಗುವ
ಕಮರುವ ಕನಸಿನ ಹೊಟ್ಟೆಗಳು...

ಮುಂದುಳಿಯುವ ಮುಂದಾಳು ಹೊಟ್ಟೆಗಳ ಹಿಂದೆ
ಕೈಕೊಡವಿ ಕೈಬಿಟ್ಟ ಮೇಲೆ ಬಿದ್ದು
ಪೆಟ್ಟು ತಿನ್ನುವ ಹಿಂದುಳಿಯುವ ಮಂದ ಹೊಟ್ಟೆಗಳು

ಕಟ್ಟೆ ಕಟ್ಟಿ ಕಸಿದಿಟ್ಟ ಒಡೆಯ ಹೊಟ್ಟೆಗಳ ಹಿಂದೆ
ಹಕ್ಕ ಕೈಚಾಚಲು ಹೆದರಿ
ಒಡೆಯ ಕೈ ಕಟ್ಟಿದ ಹೊಟ್ಟೆಗಳು...

ಮೊಸರನು ಹೀರಿ ಬಿರಿಯುವ ಹೊಟ್ಟೆಗಳ ಹಿಂದೆ
ಕೈಕೆಸರನು ನೆಚ್ಚಿ ಕೂತ
ಹನಿ ನೀರಿಲ್ಲದೆ ಬಿರುಕು ಬಿಟ್ಟ ಹೊಟ್ಟೆಗಳು...

ಝಣ ಝಣಿಸುವ ಕಿವುಡು ಹೊಟ್ಟೆಗಳ ಹಿಂದೆ
ಕಾಲಡಿ ಬಿದ್ದರೂ ಕೆಳಗೆ ಬಿದ್ದ
ಕುರುಡು ಕಾಂಚಾನಕೆ ಕಿವಿ ನಿಮಿರುವ ಹೊಟ್ಟೆಗಳು...

ಅಂಟಿರದ ಒಂಟಿ ಕ್ರೂರ ಹೊಟ್ಟೆಗಳ ಹಿಂದೆ
ಸುಲುಗೆಯಲಿ ಬದುಕ ಕಟ್ಟುವ
ಅಂಜುಬುರುಕ ಜಂಟಿ ಹೊಟ್ಟೆಗಳು...

ಹುಟ್ಟು ಒಂದಿದ್ದರೂ ಹುಟ್ಟಿದಾಗ
ಹೊಟ್ಟೆಪಾಡಿನ ಪಟ್ಟು ಕಾಯುವ, ಬೇರ್ಪಡಿಸುವ,
ಸಾವಿನಲ್ಲಿ ಹೂತ ನಂತರ ಭೂತದೊಟ್ಟೆಗಳ..

ಅರಿವಾಯ್ತು ಹೃದಯ ಕೊಟ್ಟ ದೇವ, ಹೊಟ್ಟೆ ಕೊಟ್ಟು
ಬೇರೆ ಜಾಗದಲಿಟ್ಟು, ಬೇರೆ ಊಟ ಕೊಟ್ಟು,
ಬೇರ್ಪಡಿಸಿ, ಜೀವ ಹರಿಸುವ ಮೇಲಷ್ಟು ಕೆಳಗಷ್ಟು,...

ದೇವ ಕೊಟ್ಟ ಹೊಟ್ಟೆಯೊಂದೆ ಆದರೂ ಹಿಂದೆ
ಹೊಟ್ಟೆಗಳೊಡೆದು ನಂದು ನಿಂದು ಎಂದು,
ಏಕೆ ಬೇರೆ ಹೊರುವ ಈ ಜೀವಿತದ ಭಾರವ?

ರುದ್ರಪ್ಪ...

ಮಂಗಳವಾರ, ನವೆಂಬರ್ 15, 2011

ಕೈ ಕುಲುಕುವ ಬನ್ನಿ...

ಕೈ ಕುಲುಕುವ ಬನ್ನಿ...
 
 
ಕೈ ಕುಲುಕುವ ಬನ್ನಿ ಕುದುರಿದ ವ್ಯವಹಾರಕೆ,
ಕೈ ಮುಂದೆ ಮಾಡಿ ಕೈ ಜೋಡಿಸುವ ಬನ್ನಿ ಪರಿಸರಕೆ...


ತಬ್ಬಿ ಹೇಳುವ ಬನ್ನಿ, ಧನ್ಯವಾದ ಕೊಟ್ಟ ಉಸಿರಿಗೆ,
ಕೈ ಹಿಡಿದು ಸಂಧಿಗೆ ಸಹಿ ಮಾಡುವ ಹಸಿರಿಗೆ...


ರಾಜಿ ಪತ್ರದಲಿ ರುಜು ನೀಡಿ ಹಸಿರಿಗೆ ಜೀವನ,
ಕೊಟ್ಟು ಉಸಿರನ್ನು ಸಂಭಾವನೆಯಾಗಿ ಪಡೆಯೋಣ...


ಭವಿಷ್ಯದ ಉಸಿರಿನ ಜೀವ ಬಿಂದಿಗೆ ತುಂಬಿ ಇಡೋಣ,
ಉಸಿರು ಬಿಟ್ಟು ಹೋಗುವಾಗ, ಮಕ್ಕಳ ಕೈಯಿಂದ ನೀರುಯ್ಯೋಣ...


ಹಸಿರಾಗಿ ಉಸಿರ ಉಳಿದವರಿಗೆ ಹಂಚಿ ಮರಳೋಣ,
ಮಕ್ಕಳಿಗೆ ರಾಜಿಯ ನವೀಕರಿಸಿ ಹಸ್ತಾಂತರಿಸೋಣ...


ರುದ್ರಪ್ಪ...








ಭಾನುವಾರ, ನವೆಂಬರ್ 13, 2011

ಈ ಭಾರತೀಯನಾರು?




ಚಡ್ಡಿ ಮರೆತು ಕಡ್ಡಿ ಬಾವುಟ ಹಿಡಿದು 
ಧರಿಸು ಬಿಟ್ಟು ಧಿರಿಸಿನಿಂದ ಓಡುವ ಮುಗ್ಧ ಭಾರತೀಯನಾರು..?

ಗೆಲುವಿನ ಹಸಿವನ್ನು ತಣಿಸಲು 
ಬರಿಯ ಗಂಜಿಯ ಹೀರಿ ಹಿಗ್ಗುತಿಹ ಭಾರತೀಯನಾರು..?

ಸ್ಪರ್ದೆಯ ತುರ್ತು ಸ್ಥಿತಿಗೆ ದಿಟ್ಟ ಹೆಜ್ಜೆ ಹಾಕಿ   
ಭಯಪಡದೆ ಮುನ್ನುಗ್ಗುವ ಸಾಹಸಿಗ ಈ ಭಾರತೀಯನಾರು...? 

ತ್ರಿವರ್ಣಗಳ ಎತ್ತಿ ಮೆರೆಸುವ 
ಬಣ್ಣ ಬಣ್ಣದ ಜಾತಿ ಮರೆಸುವ ಭಾರತೀಯನಾರು..?

ಕೆಟ್ಟ ರಸ್ತೆಯಲಿ ಎಡವುಕಲ್ಲುಗಳ ತಪ್ಪಿಸಿ 
ಮೂಢ ಕೊಂಪೆಯಿಂದ ಹೊರಬರುವ ಭಾರತೀಯನಾರು...? 

ದಾರಿಯುದ್ದ ಜನ ಗಣ ಮನವುಬ್ಬಿಸಿ ಹಾಡಿ 
ಹಾದಿಯುದ್ಧವ ಗೆದ್ದು ಉದ್ದ ಸಣ್ಣ ಮಾಡುವ ಭಾರತೀಯನಾರು..?

ಸ್ವಾರ್ಥಾಮಿಶದಿ ಕಳೆದುಹೋದ 
ಒಗ್ಗಟ್ಟನು ಪುಸ್ತಕದ ಕಥೆ ಮಾಡಿದ ಮೂಢರಲ್ಲಿ ನಾನ್ಯಾರು? ನೀನ್ಯಾರು?  

ರುದ್ರಪ್ಪ...