ಗುರುವಾರ, ಆಗಸ್ಟ್ 22, 2013

ಕಷ್ಟ ...

ಕಷ್ಟ ...

ಯಾರಿಗೂ ಕಾಣದಂತೆ 
ನನ್ನ ಕವಿತೆಯಲಿ 
ಆ ನಿನ್ನ ಮಧುರ ಪ್ರೀತಿಯ 
ನಾ ಎಲ್ಲಿ ಬಚ್ಚಿಡಲಿ ।।

ಎಲ್ಲೇ ಅಡಗಿಸಿದರೂ 
ಅನಾವರಣಗೊಳ್ಳುತಿದೆ 
ಎಂದೆಂದೂ ತನ್ನಿಷ್ಟಕೆ 
ಗೊಣಗುವ ಭಾವಗಳಲಿ,...

ಹೇಳು ಆ ನಿನ್ನ ಮಧುರ ಪ್ರೀತಿಯ 
ನಾ ಎಲ್ಲಿ ಬಚ್ಚಿಡಲಿ ।।

ಸುರಿದುಬಿಟ್ಟೆ ಅಕ್ಷರ ಸಾಲಿನ ಹಿಂದೆ 
ಯಾರಿಗೂ ಕಾಣದಿರಲಿ ಎಂದೇ 
ಅಡಗಿಸಿಹುದು ಸ್ಪಷ್ಟವಾಗುತಿದೆ 
ಆ ಪಾರ ದರ್ಶಕ ಸಾಲುಗಳಲಿ... 

ಹೇಳು ಆ ನಿನ್ನ ಮಧುರ ಪ್ರೀತಿಯ 
ನಾ ಎಲ್ಲಿ ಬಚ್ಚಿಡಲಿ ।।

ತಳ್ಳಿ ಬಿಳಿಯ ಬಾಗಿಲಿನ ಹಿಂದೆ 
ಕ್ಲಿಷ್ಟ ಪದಗಳ ಜಡಿದೆ 
ಹೊರಬಂತು ತನ್ನಷ್ಟಕೆ ಓದಿ 
ಹಾಡಿಕೊಳ್ಳುವ ಅಕ್ಷರಗಳ ಕೀಲಿಯಲಿ...

ಹೇಳು ಆ ನಿನ್ನ ಮಧುರ ಪ್ರೀತಿಯ 
ನಾ ಎಲ್ಲಿ ಬಚ್ಚಿಡಲಿ ।।

ಸಾಲುಗಳ ನಡುವೆ ಕಟ್ಟಿ ಹೂತಿಟ್ಟೆ 
ಕಾಣದ ಬಿಳಿ ಮೂಟೆಗಳಲಿ 
ಉಕ್ಕಿತು ಉಳಿದ ಶುಭ್ರ ಬಿಳಿಯ 
ಚಿತ್ತಾರವಾಗಿ ಕಪ್ಪಕ್ಷರಗಳ ಖವ್ವಾಲಿಯಲಿ...

ಹೇಳು ಆ ನಿನ್ನ ಮಧುರ ಪ್ರೀತಿಯ 
ನಾ ಎಲ್ಲಿ ಬಚ್ಚಿಡಲಿ ।।

ಬರೆದಾದ ಮೇಲೆ ಎಲ್ಲಿ ಬಚ್ಚಿಟ್ಟೆ 
ಎಂಬುದ ನಾ ಮರೆತು ಬಿಟ್ಟೆ 
ಬಾ ಮತ್ತೊಮ್ಮೆ ಕೊಟ್ಟುಬಿಡು 
ಈ ಹಿಂದೆ ಏನೇನು ಕೊಟ್ಟೆ ...

ಎಲ್ಲ ಕೊಟ್ಟಿದ್ದು ಬಚ್ಚಿಡುವೆ ಈ ಬಾರಿ 
ಕೊನೆಗೆ ಬರುವ ನನ್ನ ಹೆಸರಿನ ಹಿಂದೆ... 

ರುದ್ರಪ್ಪ...

ಕಾಮೆಂಟ್‌ಗಳಿಲ್ಲ: