ಗುರುವಾರ, ಆಗಸ್ಟ್ 22, 2013

ಕವಿತೆ...

ಕವಿತೆ...

ಬೆರಳಲ್ಲಿ ಪದೇ ಪದೇ 
ಪಲ್ಟಿ ಹೊಡೆಯುವ 
ಪದ, ಪೆನ್ನಿನ ಸರ್ಕಸ್ಸು,

ಗಾಳಿಯಲಿ ಗೀಚಿ 
ಒಮ್ಮೆ ಕಂಡು ಮತ್ತೊಮ್ಮೆ ಅಳಿಯುವ 
ಅವಳನ್ನೇ ಹೋಲುವ ಖಯಾಲಿ, 

ಎಷ್ಟೇ ವರ್ಣಿಸಿದರೂ 
ಅಳಿಯದೆ ಉಳಿಯುವ 
ಅಸಮಾಧಾನ,

ಆಗಾಗ ಪದಗಳಗೆತಕ್ಕೆ 
ಸ್ಪಂದಿಸುವ ತಲೆಕೆರೆತ,

ಅವಳತ್ತ ಕವಿತೆಯಾಗಿ 
ಗಾಳಿಗೆ ಹಾರಿ ಹೋದ 
ಹಾಳೆಗಳ ಫಳ ಫಳ ಸದ್ದು 

ಎಲ್ಲ ಸೇರಿ 
ಇಂದು ಇನ್ನೊಂದು ಕವಿತೆಯಾಯ್ತು...

ರುದ್ರಪ್ಪ...

ಒಲವು...

ಒಲವು...

ಛಳಿಯಲಿ ನಿನ್ನೊಲವಿನ 
ಮಳೆ ಹನಿಯ ಸಂಭ್ರಮ 
ನೆನೆದ ನನ್ನೆದೆಯ ನೆಲದಿ 
ಬಿಸಿಯುಸುರಿನ ಘಮ ಘಮ... 

ನಿನ್ನೊಲವಲಿ ಮಿಂದೆನ್ನ ಹೃದಯ
ಮೆದುವಾಯಿತಲ್ಲ ಈಗ,
ಮುದ್ದೆಯಾಗುವ ಮುನ್ನ
ತಬ್ಬಿ ತೀಡು ಬಾ ಬೇಗ!!

ರುದ್ರಪ್ಪ...

ಕೆಂಪು ಹಣತೆ

ಆಕೆಯ ಹಣೆಯಂಗಳದಲ್ಲಿ 
ಹಚ್ಚಿದೆ ಪ್ರೀತಿಯ 
ಕೆಂಪು ಹಣತೆ 
ಇಂದು ಅದಕೆ 
ನಾನೇ ಎಣ್ಣೆ 
ನಾನೇ ಬತ್ತಿ 
ಅವಳೇ ಬೆಳಕು!
ಆ ಬೆಳಕಲ್ಲೇ 
ನಮ್ಮ ಬದುಕು ...

ರುದ್ರಪ್ಪ..

ಹೆಸರು ...

ಪ್ರೀತಿಗಿಲ್ಲದ ಒತ್ತಕ್ಷರ 
ಒತ್ತಿ ಬರೆದಿದೆ ನಿನ್ನ ಹೆಸರ
ನೀನು ಮೂಡಲಿಲ್ಲ ಹೆಣ್ಣಾಗಿ 
ಉಳಿದೆ ಹಾಳೆಯ ಮೇಲೆ ಖಾಲಿ ಅಚ್ಚಾಗಿ... 

ರುದ್ರಪ್ಪ...

ಸಂಬಂಧಗಳು...

ಸಂಬಂಧಗಳು...

ಕೆಲವು ಘಟ್ಟಿ ಸಂಬಂಧಗಳು 
ಕರಗುತ್ತವೆ ಬಿಗುಮಾನದಲ್ಲಿ... 

ಇನ್ನುಳಿದವು 
ಬಿಗಿ ಮೌನದಲ್ಲಿ...

ರುದ್ರಪ್ಪ...

ಮಾಲಿನ್ಯ ...

ಮಾಲಿನ್ಯ ...

ಈಗಿನ ದಿನದಲ್ಲಿ 
ಎಷ್ಟೊಂದು ಪರಿಸರ ಮಾಲಿನ್ಯ 
ಕಣ್ಣೀರು ಸಹ 
ಸಪ್ಪೆ ಸಪ್ಪೆ ...

ರುದ್ರಪ್ಪ...

ಪ್ರೀತಿ...

ಪ್ರೀತಿ...

ನನ್ನ ಜಿಪುಣ ಜೇಬಿನಲ್ಲಿ 
ಖರ್ಚು ಮಾಡದೇ ಕಾಯ್ದಿಟ್ಟ 
ಘಟ್ಟಿ ನೋಟಿನಂತೆ 
ನಿನಗೆ ಕೊಡ ಬಯಸುವ 
ನನ್ನೆದೆಯ ಜೇಬಿನ ಪ್ರೀತಿ ...
ಖರ್ಚು ಮಾಡಲು ಕೊನೆಗೆ 
ಮನಸ್ಸು ಮಾಡಿದ್ದೇನೆ,
ಸ್ವೀಕರಿಸು ಬಾರೆ ಸುಮ್ಮನೆ !!!...



ರುದ್ರಪ್ಪ...