ಶುಕ್ರವಾರ, ಜನವರಿ 6, 2012

ಕಳೆದ ಭಾವಚಿತ್ರ ಪುಸ್ತಕ!...


ಕಳೆದದ್ದು ಸಿಕ್ಕಾಗ
ನನ್ನದೆನಿಸಿದ್ದು ಕಣ್ಮುಂದೆ ಕಂಡಾಗ
ಸಂತಸದ ಸಮುದ್ರಕೆ ಮನಸು
ಧುಮುಕಿದೆ ಕೈ ಮುಂದೆ ಮಾಡಿ, ಆಳ ನೋಡದೆ !

ಹಳೆಯ ನೆನಪುಗಳ ಕಣ್ಣು ಮುಚ್ಚಾಲೆ
ಹಸಿರು ಬಟ್ಟೆಯ ಸೇರಿ
ಒಂದೊಂದೇ ಪಾತ್ರಗಳ
ಹುಡುಕಿ ಹೊರತೆಗೆದಿವೆ ಬೆರಳು ತೋರಿ...

ಅದು ಬರಲಿ ಇದು ಬರಲಿ ಎಂದ
ನೆನಪಿನಿರುವೆಗಳು ಸಿಹಿ ಹೊತ್ತಂತೆ
ಹಿಗ್ಗಿ ಹಿಂಡಾಗಿ ಬರುತಿವೆ ಕಂಡ
ನೆನಪುಗಳು ಒಂದರ ಹಿಂದೊಂದರಂತೆ...

ಹುಚ್ಚು ಹುಚ್ಚಾಗಿ ಅಚ್ಚಾಗಿರುವ
ಹುರುಪಿನ ಹುಡುಗಾಟ ಕಣ್ಣೆದರು ಕಟ್ಟಿ
ಅದೇ ಹುಚ್ಚಿಗೆ ಮತ್ತೆ ಕೈ ಬೀಸಿ
ಕೆಣಕಿವೆ ಕಳೆದು ಹೋದ ನನ್ನ ಪದೇ ಪದೇ ಮುಟ್ಟಿ...

ಜೊತೆಯಿದ್ದು ಕಳೆದು ಕೂಡಿಸಿ
ಹಿಡಿದಿಟ್ಟ ಖುಷಿ ಕೊಟ್ಟ ಸಂಗತಿಗಳ
ಮತ್ತೆ ಮೆಲುಕಿತ್ತು ಈ ಮನ ತಿರುವುತ
ಕಳೆದು ಸಿಕ್ಕ ಹಳೆಯ ಭಾವಚಿತ್ರಗಳ...

ಚಿತ್ರಗಳಲಿ ನೀನಲ್ಲಿ ನಾನಿಲ್ಲಿ ಎಂದು ನಿಂತ
ಜಾಗಗಳು ಇನ್ನು ಅಲ್ಲೇ ಇವೆ
ಆ ಜಾಗದಲ್ಲಿ ಅಂದುಕೊಂಡ ಹಾಗೆ ಇಂದು
ನಾನಿಲ್ಲ! ಹುಡುಕಿದರೂ ನೀನಿಲ್ಲ !...

ರುದ್ರಪ್ಪ...